ಪಂಜಾಬ್ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮಾಜಿ ಬಿಜೆಪಿ ಸಂಸದ ಹಾಗೂ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ತಮ್ಮದೇ ಹೊಸ ಪಕ್ಷವನ್ನು ಹುಟ್ಟು ಹಾಕಿದ್ದಾರೆ.
ಸಿಧು ಅವರ ‘ಆವಾಝ್-ಎ-ಪಂಜಾಬ್’ ಪಕ್ಷ ಇವತ್ತು ಅಧಿಕೃತವಾಗಿ ಜನ್ಮತಾಳಿದೆ. ಹೊಸ ಪಕ್ಷದ ಘೋಷಣೆ ಬಳಿಕ ಮಾತನಾಡಿದ ಸಿಧು, ಪಂಜಾಬ್ ಪುನರುಜ್ಜೀವನವೇ ಆವಾಝ್ ಎ ಪಂಜಾಬ್ ನ ಉದ್ದೇಶ ಎಂದ್ರು. ಬಿಜೆಪಿ ಬಗ್ಗೆ ಪರೋಕ್ಷ ವಾಗ್ದಾಳಿ ನಡೆಸಿದ ಅವರು, ಭಾರತದಲ್ಲಿ ಉತ್ತಮ ನಾಯಕರನ್ನು ಮೂಕರನ್ನಾಗಿ ಮಾಡಲಾಗಿದೆ. ಉತ್ತಮ ವ್ಯಕ್ತಿಗಳನ್ನು ಅಲಂಕಾರದ ತುಣುಕುಗಳಂತೆ ಇಟ್ಟು, ಪ್ರಚಾರಕ್ಕೆ ಬಳಸಿಕೊಳ್ಳುವ ಸಂಪ್ರದಾಯ ಭಾರತದಲ್ಲಿದೆ ಅಂತಾ ಹೇಳಿದ್ರು.
ಜುಲೈ 18 ರಂದು ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಿಧು, ಎಎಪಿ ಸೇರುತ್ತಾರೆ ಎನ್ನಲಾಗಿತ್ತು. ಕಾಂಗ್ರೆಸ್ ಕೂಡ ಅವರನ್ನು ಸೆಳೆಯುವ ಪ್ರಯತ್ನ ಮಾಡಿತ್ತು. ಆದ್ರೆ ಯಾವ ಪಕ್ಷಕ್ಕೂ ಸೇರ್ಪಡೆಯಾಗದೇ ಸಿಧು ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಸಿಧು ಅವರ ಆವಾಝ್ ಎ ಪಂಜಾಬ್ ಪಕ್ಷದಲ್ಲಿ ಭಾರತ ಹಾಕಿ ತಂಡದ ಮಾಜಿ ನಾಯಕ ಪರ್ಗತ್ ಸಿಂಗ್ ಹಾಗೂ ಶಿರೋಮಣಿ ಅಕಾಲಿದಳದ ಇಬ್ಬರು ಶಾಸಕರು ಕೂಡ ಇದ್ದಾರೆ. 2017 ರ ಜನವರಿ ಅಥವಾ ಫೆಬ್ರವರಿಯಲ್ಲಿ ಪಂಜಾಬ್ ವಿಧಾನಸಭಾ ಚುನಾವಣೆ ನಡೆಯಲಿದೆ.