ಮಡಿಕೇರಿ: ತಾನು ಪ್ರೀತಿಸಿದ ಹುಡುಗಿ ಬೇರೆ ಯುವಕನೊಂದಿಗೆ ಮದುವೆಯಾಗುವುದನ್ನು ಸಹಿಸದ ದುರುಳನೊಬ್ಬ, ಕೊಲೆ ಮಾಡಿದ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಅಸಲಿ ವಿಷಯ ಏನೆಂದರೆ, ಯುವತಿಗೆ ಈತ ತನ್ನನ್ನು ಪ್ರೀತಿಸಿದ್ದು ಗೊತ್ತೇ ಇರಲಿಲ್ಲ.
ವೀರಾಜಪೇಟೆ ತಾಲ್ಲೂಕು ಬಿಟ್ಟಂಗಾಲ ಎಂಬಲ್ಲಿ 1 ವರ್ಷದ ಹಿಂದೆ ಯುವಕನೊಬ್ಬನ ಕೊಲೆಯಾಗಿತ್ತು. ಹಾತೂರು ಗ್ರಾಮದ ಯುವಕ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ. ಕಳೆದ ವರ್ಷ ಮೇ 23ರಂದು ಬೆಟ್ಟಗೇರಿ ಗ್ರಾಮದ ಯುವತಿಯೊಂದಿಗೆ ಆತನ ಮದುವೆ ನಡೆಯಬೇಕಿತ್ತು. ಮೇ 10ರಂದು ಸಂಬಂಧಿಯೊಬ್ಬರ ಮನೆಯ ಮದುವೆಗೆ ಬಂದಿದ್ದ ಆತ ನಿಗೂಢವಾಗಿ ಕೊಲೆಯಾಗಿದ್ದ. ವೀರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಮದುವೆ ನಿಶ್ಚಯವಾಗಿದ್ದ ಯುವತಿಯನ್ನು ಹೊದ್ದೂರು ಗ್ರಾಮದ ಯುವಕ ಪ್ರೀತಿಸುತ್ತಿದ್ದ. ಇದು ಒನ್ ವೇ ಲವ್ ಆಗಿದ್ದು, ಯುವತಿಗೆ ವಿಷಯವೇ ಗೊತ್ತಿರಲಿಲ್ಲ. ಆಕೆಗೆ ಬೇರೆ ಯುವಕನೊಂದಿಗೆ ಮದುವೆ ನಿಶ್ಚಯವಾಗಿದ್ದನ್ನು ಸಹಿಸದೇ ಆತನೇ ವರನನ್ನು ಕೊಲೆ ಮಾಡಿದ್ದ.
ಸಂಬಂಧಿಕರ ಮದುವೆಗೆ ಬಂದಿದ್ದ ವರನನ್ನು ಕರೆದುಕೊಂಡು ಹೋಗಿ, ಪಾನೀಯದಲ್ಲಿ ಸೈನೈಡ್ ಹಾಕಿ ಕೊಲೆ ಮಾಡಿದ್ದ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಅಸಲಿ ವಿಷಯ ಗೊತ್ತಾಗಿ, ಪೊಲೀಸರು ತನಿಖೆ ಚುರುಕುಗೊಳಿಸಿದ್ದರು.
ಈ ನಡುವೆ ಹೊದ್ದೂರು ಗ್ರಾಮದ ಕೊಲೆಗಾರ ಯುವಕ, ಯುವತಿಯ ಮದುವೆಯಾಗಲು ಮನೆಯವರಿಗೆ ಒಪ್ಪಿಸಿದ್ದು, ಇದೇ ಮೇ 30 ರಂದು ಅವರ ನಿಶ್ಚಿತಾರ್ಥ ನಡೆಯಬೇಕಿತ್ತು. ಪೊಲೀಸರು, ತನಿಖೆ ನಡೆಸಿ ಈ ಒನ್ ವೇ ಲವ್ ಕೊಲೆ ರಹಸ್ಯವನ್ನು ಪತ್ತೆ ಹಚ್ಚಿದ್ದಾರೆ.