ಮಂಡ್ಯ: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ, ಮಂಡ್ಯದಲ್ಲಿ ನಡೆಯುತ್ತಿರುವ ಹೋರಾಟ ತೀವ್ರಗೊಂಡಿದೆ.
ಖ್ಯಾತ ನಟ ದರ್ಶನ್ ಕಾವೇರಿ ಹೋರಾಟದಲ್ಲಿ ಭಾಗವಹಿಸಿದ್ದು, ಸಾಮಾನ್ಯ ಪ್ರಜೆಯಾಗಿ ಹೋರಾಟದಲ್ಲಿ ಪಾಲ್ಗೊಂಡಿದ್ದೇನೆ ಎಂದು ತಿಳಿಸಿದ್ದಾರೆ. ನಾನು ನಟನಾಗಿ ಇಲ್ಲಿಗೆ ಬಂದಿಲ್ಲ. ನೀರು, ನೆಲದ ಋಣ ತೀರಿಸಲು ಬಂದಿದ್ದೇನೆ. ಸಾಮಾನ್ಯ ಪ್ರಜೆಯಾಗಿ ಜನರೊಂದಿಗೆ ಇರುತ್ತೇನೆ. ಸರ್ಕಾರದ ವಿರುದ್ಧ ಮಾತನಾಡುವಷ್ಟು ನಾನು ದೊಡ್ಡವನಲ್ಲ. ನಾಡಿನ ಹಿತ ಕಾಯಬೇಕು, ರೈತರಿಗೆ ನೀರು ಕೊಡಬೇಕೆಂದು ಅವರು ಹೇಳಿದ್ದಾರೆ.
ನ್ಯಾಯ, ನೀತಿ, ಧರ್ಮ ಎಂಬ ಪದಗಳಿಗೆ ಅರ್ಥವೇ ಇಲ್ಲದಂತಾಗಿದೆ. ನಮಗೇ ಕುಡಿಯುವ ನೀರಿಲ್ಲ. ತಮಿಳುನಾಡಿಗೆ ಬೆಳೆಗೆ ನೀರು ಹರಿಸಲಾಗುತ್ತಿದೆ. ಮಹಾದಾಯಿ ವಿಚಾರದಲ್ಲಿಯೂ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ದರ್ಶನ್ ಹೇಳಿದ್ದಾರೆ.