ಗುಜರಾತಿನ ಅಹ್ಮದಾಬಾದ್ ಸಬರಮತಿ ಸೆಂಟ್ರಲ್ ಜೈಲಿನಲ್ಲಿರುವ ಕುಖ್ಯಾತ ಪಾತಕಿಯೊಬ್ಬ ತನಗೆ ಜೈಲಿನಲ್ಲಿ ಫೋನ್ ಬಳಸಲು ಅನುಮತಿ ಕೊಡಿ ಎಂದು ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾನೆ.
ಜೈಲಿನಲ್ಲೇ ಕುಳಿತೇ ಅಪರಾಧಿಗಳು ತಮ್ಮ ಭೂಗತ ಚಟುವಟಿಕೆಗಳನ್ನು ನಿಯಂತ್ರಿಸುತ್ತಿದ್ದಾರೆಂಬ ಕಾರಣಕ್ಕೆ ಜೈಲಿನಲ್ಲಿ ಮೊಬೈಲ್ ಜಾಮರ್ ಗಳನ್ನು ಅಳವಡಿಸಲಾಗುತ್ತಿರುವ ಮಧ್ಯೆ ಈ ಭೂಗತ ಪಾತಕಿ ಫೋನ್ ಬಳಕೆಗೆ ಬೇಡಿಕೆ ಇಟ್ಟಿರುವ ಹಿಂದೆ ಒಂದು ಕಾರಣವೂ ಇದೆ.
ಮಧ್ಯ ಪ್ರದೇಶದ ಮನೀಶ್ ಗೋಸ್ವಾಮಿ, ವಿಶಾಲ್ ಗೋಸ್ವಾಮಿ ತಂಡದ ಸದಸ್ಯನಾಗಿದ್ದು, ಈತನ ವಿರುದ್ದ ಕೊಲೆ, ದರೋಡೆ ಸೇರಿದಂತೆ ಹಲವು ಗಂಭೀರ ಪ್ರಕರಣಗಳು ದಾಖಲಾಗಿವೆ. ಕಳೆದ 23 ತಿಂಗಳಿನಿಂದಲೂ ಸಬರಮತಿ ಸೆಂಟ್ರಲ್ ಜೈಲಿನಲ್ಲಿರುವ ವಿಶಾಲ್ ಗೋಸ್ವಾಮಿಗೆ ತನ್ನ ವೃದ್ದ ತಂದೆ- ತಾಯಿಯ ಕುರಿತು ಯಾವುದೇ ಮಾಹಿತಿ ದೊರೆಯದಿರುವುದು ಚಿಂತಾಕ್ರಾಂತನನ್ನಾಗುವಂತೆ ಮಾಡಿದೆ.
ಮಧ್ಯ ಪ್ರದೇಶದ ಹಳ್ಳಿಯೊಂದರಲ್ಲಿ ನೆಲೆಸಿರುವ ಅವರ ಯೋಗಕ್ಷೇಮ ನೋಡಿಕೊಳ್ಳಲು ಯಾರೂ ಇಲ್ಲ. ಅಲ್ಲದೇ 23 ತಿಂಗಳ ಹಿಂದೆ ನನ್ನನ್ನು ನೋಡಲು ಬಂದಿದ್ದ ಅವರುಗಳ ಕುರಿತು ನಂತರ ಯಾವುದೇ ಮಾಹಿತಿ ಸಿಗುತ್ತಿಲ್ಲ. ಹಾಗಾಗಿ ತನಗೆ ಜೈಲಿನಲ್ಲಿರುವ ಫೋನ್ ಬಳಸಲು ಅನುಮತಿ ನೀಡಿದರೆ ಅನುಕೂಲವಾಗುತ್ತದೆ ಎಂದು ನ್ಯಾಯಾಲಯವನ್ನು ಕೇಳಿಕೊಂಡಿದ್ದಾನೆ.