ನವದೆಹಲಿ: ಆಮ್ ಆದ್ಮಿ ಪಕ್ಷದ ಮುಖಂಡ ಸಂದೀಪ್ ಕುಮಾರ್ ಲೈಂಗಿಕ ಹಗರಣ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಈಗಾಗಲೇ ಸಚಿವ ಸ್ಥಾನದಿಂದ ವಜಾಗೊಂಡಿದ್ದ ಅವರನ್ನು, ಪಕ್ಷದಿಂದಲೂ ಉಚ್ಛಾಟಿಸಲಾಗಿದೆ.
ಸಂತ್ರಸ್ಥೆ ಪೊಲೀಸರಿಗೆ ದೂರು ನೀಡಿದ ನಂತರದಲ್ಲಿ, ಸಂದೀಪ್ ಕುಮಾರ್ ಪೊಲೀಸರಿಗೆ ಶರಣಾಗಿದ್ದಾರೆ. ರೋಹಿಣಿ ಪ್ರದೇಶದಲ್ಲಿರುವ ಡಿ.ಜಿ.ಪಿ. ಕಚೇರಿಗೆ ತೆರಳಿ ಸಂದೀಪ್ ಕುಮಾರ್ ಶರಣಾಗಿದ್ದಾರೆ. ರೇಷನ್ ಕಾರ್ಡ್ ಮಾಡಿಸಿಕೊಡುವಂತೆ ಹೋಗಿದ್ದ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾಗಿದ್ದ ಸಂದೀಪ್ ಕುಮಾರ್, ಪಾನೀಯದಲ್ಲಿ ಅಮಲು ಬರುವ ಪದಾರ್ಥ ನೀಡಿ ಅತ್ಯಾಚಾರ ಎಸಗಿದ್ದರು ಎಂದು ಮಹಿಳೆ ಸುಲ್ತಾನ್ ಪುರಿ ಠಾಣೆಗೆ ದೂರು ನೀಡಿದ್ದಾರೆ.
ಇದಾದ ನಂತರದಲ್ಲಿ ಪ್ರತಿಕ್ರಿಯೆ ನೀಡಿದ್ದ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಮಹಿಳೆ ಕೊಟ್ಟ ದೂರಿನಲ್ಲಿ ಸತ್ಯಾಂಶವಿದ್ದರೆ, ಕಠಿಣ ಶಿಕ್ಷೆ ಆಗಬೇಕು ಎಂದು ಹೇಳಿದ್ದಾರೆ. ದೂರು ದಾಖಲಾದ ನಂತರ ಸಂದೀಪ್ ಕುಮಾರ್ ಪೊಲೀಸರಿಗೆ ಶರಣಾಗಿದ್ದಾರೆ.