ಐಟಿ ಕ್ಷೇತ್ರದ ದೈತ್ಯ ಸಂಸ್ಥೆ ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿಯವರು 21 ವರ್ಷದ ನಂತರ ಪುಣೆಯಲ್ಲಿ ಆಟೋ ಪ್ರಯಾಣ ಮಾಡಿದ್ದಾರೆ. ಶುಕ್ರವಾರ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ಅವರು ಆಟೋದಲ್ಲಿ ಪ್ರಯಾಣಿಸಿದ ಅನುಭವವನ್ನು ಹಂಚಿಕೊಂಡಿದ್ದಾರೆ.
ಗುರುವಾರ ನಾರಾಯಣಮೂರ್ತಿ, ಸ್ನೇಹಿತರೊಬ್ಬರ ಜೊತೆ ತೆರಳಬೇಕಾಗಿತ್ತು. ಇಬ್ಬರೂ ಪರಸ್ಪರ ಭೇಟಿಯಾಗಿ ನಂತರ ನಿಗದಿತ ಸ್ಥಳಕ್ಕೆ ಹೋಗುವುದಾಗಿ ಮಾತನಾಡಿಕೊಂಡಿದ್ದರು. ಮಾತಿನ ನಡುವೆ ಉಂಟಾದ ಚಿಕ್ಕ ಗೊಂದಲದಿಂದಾಗಿ ಸ್ನೇಹಿತರು ತಮ್ಮ ಕಾರು ತಂದಿರಲಿಲ್ಲ. ಆಗ ಮೂರ್ತಿಯವರು ನಾವಿಬ್ಬರು ಆಟೋದಲ್ಲೇ ಏಕೆ ಹೋಗಬಾರದು ಎಂದ ಕಾರಣ ಇಬ್ಬರೂ ಆಟೋ ಪ್ರಯಾಣದ ಅನುಭವ ಪಡೆದಿದ್ದಾರೆ. 70-80 ರ ದಶಕದಲ್ಲಿ ಪತ್ನಿ ಸುಧಾ ಜೊತೆ ಆಟೋದಲ್ಲಿ ಪ್ರಯಾಣ ಮಾಡಿದ್ದೆ ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ.
ಸಮಾರಂಭದಲ್ಲಿ ಮಾತನಾಡಿದ ಅವರು, “ಉದ್ಯೋಗಿಗಳ ದೇಶವಾಗಿರುವ ಭಾರತದ ಬಡತನವನ್ನು ನೀಗಿಸಲು ನಾವು ಶಕ್ತಿಮೀರಿ ಪ್ರಯತ್ನಿಸಬೇಕು. ಐಶ್ವರ್ಯವಂತರನ್ನು ಪೂಜನೀಯ ಭಾವದಿಂದ ಕಾಣುವುದು ನನಗೆ ಇಷ್ಟವಾಗುವುದಿಲ್ಲ. ದೇಶದ ಹೆಚ್ಚಿನ ಜನರು ಸಿರಿವಂತರಾಗಬೇಕೆಂದರೆ ನಾವು ಉದ್ಯೋಗಿಗಳನ್ನು ಕಡೆಗಣಿಸದೇ ಅವರಿಗೆ ಪ್ರೋತ್ಸಾಹ ನೀಡಬೇಕು” ಎಂದರು.