ನವದೆಹಲಿ: ‘ಬದುಕಿ ಬದುಕಲು ಬಿಡಿ’ ತತ್ವದಡಿ ತಮಿಳುನಾಡಿಗೆ ನೀರು ಬಿಡಬೇಕೆಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ದೆಹಲಿಯಲ್ಲಿ ಫಾಲಿ ಎಸ್.ನಾರಿಮನ್ ಅವರೊಂದಿಗೆ ಚರ್ಚಿಸಲಿದ್ದಾರೆ.
ಸುಪ್ರೀಂ ಕೋರ್ಟ್ ನಲ್ಲಿ ಕರ್ನಾಟಕದ ಪರ ವಕೀಲರಾಗಿರುವ ಫಾಲಿ ಎಸ್. ನಾರಿಮನ್ ಅವರನ್ನು ಭೇಟಿಯಾಗಲಿರುವ ಸಿದ್ಧರಾಮಯ್ಯ, ಕಾವೇರಿ ನದಿ ನೀರು ಬಿಡುವ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ಸೂಚನೆ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ. ಕರ್ನಾಟಕಕ್ಕೆ ನೀರು ಬಿಡಲು ನಿರ್ದೇಶನ ನೀಡುವಂತೆ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ, ಸ್ವಲ್ಪವಾದರೂ ತಮಿಳುನಾಡಿಗೆ ನೀರು ಬಿಡುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತಿಳಿಸಿದೆ.
ರಾಜ್ಯದ ಪರ ವಕೀಲರಾದ ಫಾಲಿ ಎಸ್. ನಾರಿಮನ್ ಕರ್ನಾಟಕದಲ್ಲಿ ಬರಗಾಲದ ಸ್ಥಿತಿ ಇದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಇಲ್ಲದ ಕಾರಣ ನೀರು ಬಿಡಲು ಆಗುವುದಿಲ್ಲ ಎಂದು ಹೇಳಿದ್ದು, ‘ಬದುಕಿ ಬದುಕಲು ಬಿಡಿ’ ತತ್ವದಡಿ ಸ್ವಲ್ಪವಾದರೂ ನೀರು ಬಿಡಿ ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಸಿದ್ಧರಾಮಯ್ಯ, ನಾರಿಮನ್ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.