ಬೆಂಗಳೂರು: ಒಡಿಶಾದಲ್ಲಿ ಅಂಬುಲೆನ್ಸ್ ಸಿಗದೇ ಹೆಗಲ ಮೇಲೆಯೇ ಪತ್ನಿಯ ಶವ ಹೊತ್ತು ಗ್ರಾಮಕ್ಕೆ ತೆರಳಿದ ಮಾಂಝಿ ಪ್ರಕರಣ ನೆನಪಿಸುವ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.
ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿದ್ದ ಹಿನ್ನಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶವ ಸಾಗಿಸಲು ಕುಟುಂಬವೊಂದು ಪರದಾಡಿದ ಘಟನೆ ನಡೆದಿದೆ. ಅಂಬುಲೆನ್ಸ್ ನಲ್ಲಿ ಶವ ಸಾಗಿಸಲು ಎರಡು ಪಟ್ಟು ಹೆಚ್ಚಿಗೆ ಹಣ ಕೊಡುವಂತೆ ಚಾಲಕ ಬೇಡಿಕೆ ಇಟ್ಟಿದ್ದಾನೆ. ಶ್ರೀರಾಮಚಂದ್ರ ನಗರದ ತಾಜುನ್ನೀಸಾ ಎಂಬ ಮಹಿಳೆ ಮೃತಪಟ್ಟಿದ್ದು, ಅವರ ಶವ ಸಾಗಿಸಲು ಕುಟುಂಬದವರು ಕೇಳಿಕೊಂಡಾಗ ಖಾಸಗಿ ಅಂಬುಲೆನ್ಸ್ ಚಾಲಕ 2,500 ರೂ. ಹಣ ಕೇಳಿದ್ದಾನೆ ಎನ್ನಲಾಗಿದೆ.
ವಾಹನಗಳ ಸಂಚಾರ ವಿರಳವಾಗಿದ್ದರಿಂದ ಪರದಾಡಿದ ಮೃತರ ಕುಟುಂಬದವರು, ಕೊನೆಗೆ ಕ್ಯಾಂಟರ್ ಒಂದರಲ್ಲಿ ಆಸ್ಪತ್ರೆಯಿಂದ ಮನೆಗೆ ಶವ ಸಾಗಿಸಿದ್ದಾರೆ. ಅಂಬುಲೆನ್ಸ್ ಚಾಲಕನ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.