ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂ, ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿರುವ ಹೈದರಾಬಾದ್ ನಲ್ಲಿ ಗುಟ್ಕಾ ತಯಾರಿಕಾ ಫ್ಯಾಕ್ಟರಿ ಹೊಂದಿದ್ದು, ಅದನ್ನು ಆತನ ಸಹೋದರ ಅನೀಸ್ ಇಬ್ರಾಹಿಂ ನಿರ್ವಹಿಸುತ್ತಿದ್ದಾನಂತೆ. ಆಘಾತಕಾರಿ ಸಂಗತಿಯೆಂದರೆ ಈ ಫ್ಯಾಕ್ಟರಿ ಆರಂಭಕ್ಕೆ ಭಾರತದ ಗುಟ್ಕಾ ಕಂಪನಿಗಳ ಮಾಲೀಕರಿಬ್ಬರು ಸಹಕಾರ ನೀಡಿರುವುದು.
ಬಹು ಹಿಂದೆಯೇ ದಾವೂದ್ ಇಬ್ರಾಹಿಂ ಈ ಗುಟ್ಕಾ ತಯಾರಿಕಾ ಫ್ಯಾಕ್ಟರಿಯನ್ನು ಆರಂಭಿಸಿದ್ದು, ಇದಕ್ಕೆ ಬೇಕಾದ ಯಂತ್ರೋಪಕರಣಗಳನ್ನು ಭಾರತ ಮೂಲದ ಇಬ್ಬರು ಉದ್ಯಮಿಗಳು ದುಬೈ ಮೂಲಕ ಪಾಕಿಸ್ತಾನಕ್ಕೆ ರವಾನಿಸಿದ್ದಾರಂತೆ.
ಮಾಣಿಕ್ ಚಂದ್ ಕಂಪನಿಯ ಮಾಲೀಕ ಆರ್.ಎಂ. ಧಾರಿವಾಲಾ ಹಾಗೂ ಗೋವಾ ಗುಟ್ಕಾ ಕಂಪನಿಯ ಮಾಲೀಕ ಜೆ.ಎಂ. ಜೋಷಿ, ದಾವೂದ್ ನ ಗುಟ್ಕಾ ಫ್ಯಾಕ್ಟರಿ ಆರಂಭಕ್ಕೆ ಸಹಕಾರ ನೀಡಿದವರಾಗಿದ್ದಾರೆ. ಧಾರಿವಾಲಾ ಹಾಗೂ ಜೋಷಿ ನಡುವೆ ಹಣಕಾಸು ವ್ಯವಹಾರದಲ್ಲಿ ಕಲಹವೇರ್ಪಟ್ಟಿದ್ದ ವೇಳೆ ಈ ಸಮಸ್ಯೆ ದಾವೂದ್ ಇಬ್ರಾಹಿಂ ಮಧ್ಯಸ್ಥಿಕೆಯಲ್ಲಿ ಬಗೆ ಹರಿದಿತ್ತೆನ್ನಲಾಗಿದೆ. ಇದಕ್ಕೆ ಪ್ರತಿಫಲವಾಗಿ ಇಬ್ಬರೂ ದಾವೂದ್ ಇಬ್ರಾಹಿಂ ಗುಟ್ಕಾ ಫ್ಯಾಕ್ಟರಿ ಆರಂಭಿಸಲು ಸಹಕಾರ ನೀಡಿದ್ದರೆಂಬುದು ಬಯಲಾಗಿದೆ.