ಮಂಗಳೂರು: ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ವಿದ್ಯಾರ್ಥಿನಿಯರ ಟಾಯ್ಲೆಟ್ ನಲ್ಲಿ ಮೊಬೈಲ್ ಇಟ್ಟು, ರಹಸ್ಯವಾಗಿ ಚಿತ್ರೀಕಣ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.
ವಿಶ್ವವಿದ್ಯಾಲಯದ ಬಯೋ ಸೈನ್ಸ್ ವಿಭಾಗದ ವಿದ್ಯಾರ್ಥಿನಿಯರ ಶೌಚಾಲಯದ ಮೇಲ್ಭಾಗದಲ್ಲಿ ಹಲಗೆಯ ಮೇಲೆ ಮೊಬೈಲ್ ಫೋನ್ ಇರಿಸಿ, ರಹಸ್ಯವಾಗಿ ಚಿತ್ರೀಕರಣ ಮಾಡಲಾಗಿದೆ. ಆಗಸ್ಟ್ 24 ರಂದು ಶೌಚಾಲಯಕ್ಕೆ ಹೋದ ವಿದ್ಯಾರ್ಥಿನಿ, ಮೇಲೆ ನೋಡಿದಾಗ, ಬಿಳಿ ಬಟ್ಟೆಯಲ್ಲಿ ಮೊಬೈಲ್ ಸುತ್ತಿಟ್ಟು ಚಿತ್ರೀಕರಣ ಮಾಡಿರುವುದು ಗೊತ್ತಾಗಿದೆ. ಆಕೆ ವಿಭಾಗದ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದಾಳೆ.
ಪರಿಶೀಲನೆ ನಡೆಸಿದಾಗ, ಮೊಬೈಲ್ ಗೆ ಪವರ್ ಬ್ಯಾಂಕ್ ಕೂಡ ಜೋಡಿಸಿ ಇಡಲಾಗಿತ್ತು. ಮೊಬೈಲ್ ನಿಂದ ವಿಡಿಯೋ ಕ್ಲಿಪ್ ಸೆಂಡ್ ಆಗಿವೆ ಎನ್ನಲಾಗಿದ್ದು, ಆಗಸ್ಟ್ 25 ರಂದು ವಿ.ವಿ. ಆಂತರಿಕ ತನಿಖಾ ಸಮಿತಿಯಿಂದ ತನಿಖೆ ಆರಂಭಿಸಲಾಗಿದೆ. ಪೊಲೀಸರಿಗೂ ಮಾಹಿತಿ ನೀಡಲಾಗಿದೆ. ಅಲ್ಲದೇ, ವಿಡಿಯೋಗಳು ಜಾಲತಾಣದಲ್ಲಿ ಹರಿದಾಡುತ್ತಿವೆ ಎಂದು ಹೇಳಲಾಗಿದೆ.