ಕೆಲ ಪ್ರಕರಣಗಳಲ್ಲಿ ಪಾಸ್ ಪೋರ್ಟ್ ನಲ್ಲಿ ತಂದೆಯ ಹೆಸರಿನ ಬದಲಿಗೆ ತಾಯಿಯ ಹೆಸರಿದ್ದರೆ ಸಾಕು ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯಕ್ಕೆ ಬಂದಿದೆ.
ಅವಿವಾಹಿತ ತಾಯಂದಿರು, ಲೈಂಗಿಕ ಕಾರ್ಯಕರ್ತರು, ಅತ್ಯಾಚಾರ ಸಂತ್ರಸ್ಥರು ಸೇರಿದಂತೆ ಹಲವರು ಮಗುವಿನ ಪಾಲನೆ, ಪೋಷಣೆ ಮಾಡಿಕೊಂಡು ಬರುತ್ತಿದ್ದು, ಇಂತಹ ಪ್ರಕರಣಗಳಲ್ಲಿ ಪಾಸ್ ಪೋರ್ಟ್ ನಲ್ಲಿ ತಂದೆಯ ಹೆಸರನ್ನು ಕಡ್ಡಾಯವಾಗಿ ನಮೂದಿಸಬೇಕೆಂದು ಹೇಳುವುದು ಸರಿಯಲ್ಲವೆಂದು ನ್ಯಾಯಾಲಯ ಹೇಳಿದೆ.
ತನ್ನ ಮಗುವಿನ ಪಾಸ್ ಪೋರ್ಟ್ ನಲ್ಲಿ ತಂದೆಯ ಹೆಸರನ್ನು ತೆಗೆಸಿ ಬದಲಿ ಪಾಸ್ ಪೋರ್ಟ್ ನೀಡಬೇಕೆಂದು ಮಹಿಳೆಯೊಬ್ಬರು ಮಾಡಿದ್ದ ಮನವಿಯನ್ನು ಪಾಸ್ ಪೋರ್ಟ್ ಕಛೇರಿ ಅಧಿಕಾರಿಗಳು ತಿರಸ್ಕರಿಸಿದ್ದ ಕಾರಣ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ತಮ್ಮ ಪತಿ, ಹೆಣ್ಣು ಮಗುವಿಗೆ ಜನ್ಮ ನೀಡಿದ ಹಿನ್ನಲೆಯಲ್ಲಿ ತಮ್ಮಿಂದ ವಿಚ್ಚೇದನ ಪಡೆದಿದ್ದಾರೆ. ಅಲ್ಲದೇ ತಂದೆಯಾಗಿ ಅವರು ಮಗಳ ಯಾವುದೇ ಜವಾಬ್ದಾರಿಯನ್ನು ನಿಭಾಯಿಸದ ಕಾರಣ ಮಗಳ ಪಾಸ್ ಪೋರ್ಟ್ ನಲ್ಲಿ ತಂದೆಯ ಹೆಸರನ್ನು ತೆಗೆಯಬೇಕೆಂದು ಅವರು ಮನವಿ ಮಾಡಿದ್ದರು. ಅವರ ಮನವಿಯನ್ನು ನ್ಯಾಯಾಲಯ ಈಗ ಎತ್ತಿ ಹಿಡಿದಿದೆ.