ಪಣಜಿ: ಚಿನ್ನದ ಬೆಲೆ ಏರಿಕೆಯಾದಂತೆ ಕಳ್ಳ ಸಾಗಣೆ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ವಿದೇಶಗಳಿಂದ ಅಕ್ರಮವಾಗಿ ಚಿನ್ನವನ್ನು ಸಾಗಣೆ ಮಾಡುತ್ತಿರುವ ಅನೇಕ ಘಟನೆಗಳು ನಡೆದಿವೆ.
ವಿಮಾನ ನಿಲ್ದಾಣಗಳಲ್ಲಿ ತಪಾಸಣೆಯ ಸಂದರ್ಭದಲ್ಲಿ ಚಿನ್ನವನ್ನು ಹೇಗೇಗೋ ಅಡಗಿಸಿಕೊಂಡ ಬಗ್ಗೆ ಕೇಳಿರುತ್ತೀರಿ. ಗೋವಾದಲ್ಲಿ ಬರೋಬ್ಬರಿ 2.5 ಕೆ.ಜಿ. ಚಿನ್ನವನ್ನು ವಿಮಾನದ ಶೌಚಾಲಯದಲ್ಲಿಟ್ಟು ಸಾಗಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ದುಬೈನಿಂದ ಗೋವಾ ವಿಮಾನ ನಿಲ್ದಾಣಕ್ಕೆ ಬಂದ ಏರ್ ಇಂಡಿಯಾ ವಿಮಾನದ ಶೌಚಾಲಯದಲ್ಲಿ ವಾರಸುದಾರರಿಲ್ಲದ 2.5 ಕೆ.ಜಿ. ಚಿನ್ನ ಪತ್ತೆಯಾಗಿದೆ.
ಶೌಚಾಲಯದಲ್ಲಿ ಚಿನ್ನವನ್ನು ಬಚ್ಚಿಟ್ಟಿದ್ದು, ಇದನ್ನು ಗಮನಿಸಿದ ಏರ್ ಇಂಡಿಯಾ ವಿಮಾನದ ಸಿಬ್ಬಂದಿ ಹಾಗೂ ನಿಲ್ದಾಣದ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು, ಪ್ರಯಾಣಿಕರ ವಿಚಾರಣೆ ನಡೆಸಿದ್ದಾರೆ ಎಂದು ವರದಿಯಾಗಿದೆ.