ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ವಾರ್ಷಿಕ ವರದಿಯನ್ನು ಪ್ರಕಟಿಸಲಾಗಿದ್ದು, ಅದರಂತೆ ಅಲ್ಪಾವಧಿ ಬಡ್ಡಿ ದರಗಳು ಇಳಿಯುವ ಸಾಧ್ಯತೆ ಕಡಿಮೆ ಇದೆ. ಹಣದುಬ್ಬರ ಗರಿಷ್ಠ ಮಿತಿಗಿಂತ ಹೆಚ್ಚಾಗಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.
2015-16 ನೇ ಸಾಲಿನ ವಾರ್ಷಿಕ ವರದಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದ್ದು, ಇದರ ಮುನ್ನುಡಿಯಲ್ಲಿ ಆರ್.ಬಿ.ಐ. ಗವರ್ನರ್ ರಘುರಾಮ್ ರಾಜನ್ ಅವರು, ಹಣದುಬ್ಬರ ಆರ್.ಬಿ.ಐ. ನಿಗದಿಪಡಿಸಿದ್ದ ಗರಿಷ್ಠ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಇರುವ ಕಾರಣ, ಸದ್ಯಕ್ಕೆ ಅಲ್ಪಾವಧಿ ಬಡ್ಡಿಯ ದರಗಳು ಇಳಿಯುವ ಸಾಧ್ಯತೆ ಕಡಿಮೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆರ್ಥಿಕ ಬೆಳವಣಿಗೆ ಚೇತರಿಕೆ ಕಂಡಿದ್ದರೂ, ಬೆಳವಣಿಗೆ ದರ ಕಡಿಮೆ ಮಟ್ಟದಲ್ಲಿ ಇದೆ ಎಂದಿದ್ದಾರೆ.
ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಕಳೆದ 2 ವರ್ಷಗಳಲ್ಲೇ ಗರಿಷ್ಠ ಮಟ್ಟ ಶೇ.6.07ಕ್ಕೆ ತಲುಪಿದೆ. ಅದೇ ರೀತಿ ಸಗಟು ಬೆಲೆ ಸೂಚ್ಯಂಕ ಆಧರಿಸಿದ ಹಣದುಬ್ಬರ 23 ತಿಂಗಳ ಗರಿಷ್ಠ ಮಟ್ಟವಾದ ಶೇ.3.55 ತಲುಪಿದೆ. ಇವು ಗಮನಾರ್ಹ ಪ್ರಮಾಣದಲ್ಲಿ ಇಳಿಕೆಯಾದರೆ ಮಾತ್ರ ಬಡ್ಡಿದರ ಇಳಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.