ನವದೆಹಲಿ: ರಿಯೋ ಒಲಿಂಪಿಕ್ಸ್ ನಲ್ಲಿ ನಿರಾಸೆ ಅನುಭವಿಸಿದ, ಭಾರತದ ಬಾಹುಬಲಿ ಖ್ಯಾತಿಯ ಯೋಗೇಶ್ವರ್ ದತ್ ಅವರಿಗೆ ಬೆಳ್ಳಿ ಪದಕ ಸಿಗಲಿದೆ ಎನ್ನಲಾಗಿದೆ. 2012 ರಲ್ಲಿ ನಡೆದ ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕವನ್ನು ಯೋಗೇಶ್ವರ್ ದತ್ ಗಳಿಸಿದ್ದರು.
ಭಾರತದ ಫ್ರೀ ಸ್ಟೈಲ್ ಕುಸ್ತಿಪಟು ಯೋಗೇಶ್ವರ್ ದತ್, ಲಂಡನ್ ಒಲಿಂಪಿಕ್ಸ್ ನಲ್ಲಿ 60 ಕೆ.ಜಿ. ವಿಭಾಗದ ಕುಸ್ತಿಯಲ್ಲಿ ಕಂಚಿನ ಪದಕ ಗಳಿಸಿದರೆ, ರಷ್ಯಾದ ಬೆಸಿಕ್ ಕುಡುಕೊವ್ ಬೆಳ್ಳಿ ಪದಕ ಗಳಿಸಿದ್ದರು. ಬೆಸಿಕ್ ಅವರು ಲಂಡನ್ ಒಲಿಂಪಿಕ್ಸ್ ನಲ್ಲಿ ನಿಷೇಧಿತ ಉದ್ದೀಪನ ಮದ್ದು ಸೇವನೆ ಸೇವಿಸಿರುವುದು ಈಗ ದೃಢಪಟ್ಟಿದೆ ಎನ್ನಲಾಗಿದೆ. ದಕ್ಷಿಣ ರಷ್ಯಾದಲ್ಲಿ ನಡೆದ ಕಾರ್ ಅಪಘಾತದಲ್ಲಿ 27 ವರ್ಷದ ಬೆಸಿಕ್ ಕುಡುಕೊವ್ ಮೃತಪಟ್ಟಿದ್ದಾರೆ.
4 ಬಾರಿ ವಿಶ್ವ ಚಾಂಪಿಯನ್ ಆಗಿರುವ ಬೆಸಿಕ್ ಕುಡುಕೊವ್, 2 ಬಾರಿ ಒಲಿಂಪಿಕ್ಸ್ ನಲ್ಲಿ ಪದಕ ಗಳಿಸಿದ್ದಾರೆ. ಅವರು ಲಂಡನ್ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗಳಿಸಿದರೆ, ಯೋಗೇಶ್ವರ್ ದತ್ ಕಂಚಿನ ಪದಕ ಗಳಿಸಿದ್ದರು.
ಇದೀಗ, ಬೆಸಿಕ್ ನಿಷೇಧಿತ ಮದ್ದು ಸೇವನೆ ಮಾಡಿರುವುದಾಗಿ ವರದಿಯಾಗಿರುವುದರಿಂದ ಯೋಗೇಶ್ವರ್ ದತ್ ಅವರಿಗೆ ಬೆಳ್ಳಿ ಪದಕ ಸಿಗುವ ಸಾಧ್ಯತೆ ಇದೆ. ರಿಯೋದಲ್ಲಿ ನಿರಾಸೆ ಅನುಭವಿಸಿದ ಯೋಗೇಶ್ವರ್, ಲಂಡನ್ ಒಲಿಂಪಿಕ್ಸ್ ನ ಬೆಳ್ಳಿ ಪದಕ ಪಡೆಯುವ ಕುರಿತು ಒಲಿಂಪಿಕ್ಸ್ ಸಮಿತಿ ತೀರ್ಮಾನ ಕೈಗೊಳ್ಳಬೇಕಿದೆ. ಈ ಕುರಿತಂತೆ ರಷ್ಯಾ ಮಾಧ್ಯಮಗಳಲ್ಲಿ ವರದಿಯಾಗಿದೆ.