ಝಾರ್ಖಂಡ: ಜಮ್ಶೇಡ್ ಪುರದಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ದಾಲಭೂಮಗಢ ರೈಲ್ವೆನಿಲ್ದಾಣದ ಚಿತ್ರಣ ಎಂತವರನ್ನೂ ದಂಗಾಗುವಂತೆ ಮಾಡುತ್ತದೆ. ಇಲ್ಲಿನ ಮಕ್ಕಳು ಜೀವದ ಹಂಗು ತೊರೆದು ನಿಂತ ರೈಲಿನಡಿ ನುಸುಳಿ ಶಾಲೆಗೆ ಹೋಗುತ್ತಾರೆ.
ಪುಸ್ತಕದ ಚೀಲವನ್ನು ಹೊತ್ತ ಮಕ್ಕಳು ರೈಲಿನ ಕೆಳಗೆ ನುಸುಳಿ ಹೋಗುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಗದಿತ ಸಮಯಕ್ಕೆ ಶಾಲೆಗೆ ತಲುಪಬೇಕೆಂದರೆ ಮಕ್ಕಳು ರೈಲಿನ ಕೆಳಗೆ ನುಸುಳಲೇಬೇಕಾಗಿದೆ. ರೈಲು ಚಲಿಸುವ ತನಕ ಕಾದು ನಿಂತರೆ ಶಾಲೆಯ ಸಮಯ ಮೀರುತ್ತದೆ. ಶಾಲೆಯನ್ನು ತಲುಪಲು ಇದೇ ಅವರಿಗೆ ಸಮೀಪದ ದಾರಿಯಾಗಿರುವುದರಿಂದ ಎಲ್ಲ ಮಕ್ಕಳೂ ಈ ಮಾರ್ಗವನ್ನೇ ಅನುಸರಿಸುತ್ತಿದ್ದಾರೆ.
ಇಂತಹ ಅಪಾಯಕಾರಿ ಸ್ಥಳದಲ್ಲಿ ಮಕ್ಕಳು ಹೋಗುತ್ತಿದ್ದರೂ ಸಮಸ್ಯೆ ಪರಿಹರಿಸಲು ಯಾರೂ ಗಮನ ಹರಿಸುತ್ತಿಲ್ಲ. ಸಂಬಂಧಪಟ್ಟ ಇಲಾಖೆಗಳು ಇದರ ಬಗ್ಗೆ ದಿವ್ಯ ನಿರ್ಲಕ್ಷ ತಾಳಿವೆ.