ಆಟದಲ್ಲಿ ಸೋಲು, ಗೆಲುವು ಸಾಮಾನ್ಯವಾದರೂ, ಗೆದ್ದವರಿಗೆ ಸಿಕ್ಕಷ್ಟು ಮನ್ನಣೆ, ಗೌರವ ಸೋತವರಿಗೆ ಸಿಗಲ್ಲ. ಮನ್ನಣೆ ಸಿಗದಿದ್ದರೆ ಅಡ್ಡಿಯಿಲ್ಲ, ಸೋತ ಆಟಗಾರರಿಗೆ ಶಿಕ್ಷೆ ವಿಧಿಸಿದರೆ ಪರಿಸ್ಥಿತಿ ಹೇಗಿರಬೇಡ?
ರಿಯೋ ಒಲಿಂಪಿಕ್ಸ್ ನಲ್ಲಿ ನಿರೀಕ್ಷಿತ ಸಾಧನೆ ಮಾಡದ ಕ್ರೀಡಾಪಟುಗಳಿಗೆ ಶಿಕ್ಷೆ ನೀಡಲು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಅನ್ ಮುಂದಾಗಿದ್ದು, ಇದು ಕ್ರೀಡಾಪಟುಗಳನ್ನು ಚಿಂತೆಗೀಡು ಮಾಡಿದೆ. ರಿಯೋ ಒಲಿಂಪಿಕ್ಸ್ ನಲ್ಲಿ ಉತ್ತರ ಕೊರಿಯಾದ ಕ್ರೀಡಾಪಟುಗಳು ನಿರೀಕ್ಷಿತ ಸಾಧನೆ ತೋರದ ಕಾರಣ, ಸೋತ ಕ್ರೀಡಾಪಟುಗಳನ್ನು ಗಣಿ ಕೆಲಸಕ್ಕೆ ಕಳುಹಿಸಲು ಕಿಮ್ ಜಾಂಗ್ ತೀರ್ಮಾನಿಸಿದ್ದಾಗಿ ವರದಿಯಾಗಿದೆ.
2010 ರಲ್ಲಿ ನಡೆದ ವಿಶ್ವಕಪ್ ಫುಟ್ ಬಾಲ್ ಪಂದ್ಯಾವಳಿಯಲ್ಲಿ ಹೀನಾಯವಾಗಿ ಸೋತ ತಂಡವನ್ನು ಗಣಿ ಕೆಲಸಕ್ಕೆ ಕಳುಹಿಸಿದ್ದ ಕಿಮ್ ಜಾಂಗ್, 2 ವರ್ಷ ಮನೆಗೆ ಹೋಗದಂತೆ ನಿರ್ಬಂಧ ಹಾಕಿದ್ದನಂತೆ. ರಿಯೋ ಒಲಿಂಪಿಕ್ಸ್ ನಲ್ಲಿ 2 ಚಿನ್ನ, 3 ಬೆಳ್ಳಿ ಹಾಗೂ 2 ಕಂಚಿನ ಪದಕಗಳನ್ನು ಉತ್ತರ ಕೊರಿಯಾ ಕ್ರೀಡಾಪಟುಗಳು ಗೆದ್ದಿದ್ದಾರೆ.
ದಕ್ಷಿಣ ಕೊರಿಯಾ ಕ್ರೀಡಾಪಟುಗಳು 9 ಚಿನ್ನ ಸೇರಿದಂತೆ 21 ಪದಕ ಗೆದ್ದಿದ್ದು, ತಮ್ಮ ದೇಶದ ಕ್ರೀಡಾಪಟುಗಳು ನಿರೀಕ್ಷಿತ ಸಾಧನೆ ಮಾಡಿಲ್ಲ ಎಂದು ಅಸಮಾಧಾನಗೊಂಡಿರುವ ಕಿಮ್ ಜಾಂಗ್, ಅವರನ್ನು ಗಣಿ ಕೆಲಸಕ್ಕೆ ಕಳುಹಿಸುವ ಸಾಧ್ಯತೆ ಇದೆ.