ಮುಂಬೈನ ಹಾಜಿ ಅಲಿ ದರ್ಗಾ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶ ಸಿಕ್ಕಿದೆ. ಬಾಂಬೆ ಹೈಕೋರ್ಟ್ ಐತಿಹಾಸಿಕ ತೀರ್ಪನ್ನು ನೀಡಿದೆ. ಈ ಹಿಂದೆ ಮಹಿಳೆಯರು ಕೇವಲ ದರ್ಗಾದ ಹೊರಾಂಗಣದಲ್ಲಿ ಮಾತ್ರ ನಮಾಜ್ ಮಾಡಬಹುದಿತ್ತು. ಆದ್ರೆ ಇನ್ಮುಂದೆ ಒಳಗೆ ಪ್ರವೇಶ ಮಾಡಬಹುದಾಗಿದೆ. ದರ್ಗಾ ಆಡಳಿತ ಮಂಡಳಿ, ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದೆ.
2014 ರಲ್ಲಿ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಲಾಗಿತ್ತು. ಪರ-ವಿರೋಧಿ ವಾದಗಳನ್ನು ಆಲಿಸಿದ್ದ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ಐತಿಹಾಸಿಕ ತೀರ್ಪನ್ನು ನೀಡಿದೆ. ಸಂವಿಧಾನದಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಸಮಾನ ಸ್ಥಾನವಿದೆ. ಹಾಗಾಗಿ ಮಹಿಳೆಯರು ದರ್ಗಾ ಒಳಗೆ ಪ್ರವೇಶ ಮಾಡಬಹುದೆಂದು ಕೋರ್ಟ್ ಹೇಳಿದೆ.
2011 ರವರೆಗೆ ಮಹಿಳೆಯರು ದರ್ಗಾ (ಗರ್ಭಗುಡಿ) ಒಳಗೆ ಪ್ರವೇಶ ಮಾಡಬಹುದಿತ್ತು. ಆದ್ರೆ 2012ರಲ್ಲಿ ಆಡಳಿತ ಮಂಡಳಿ ಮಹಿಳೆಯರ ಪ್ರವೇಶವನ್ನು ನಿಷೇಧಿಸಿತ್ತು. ಷರಿಯಾ ಕಾನೂನಿನಲ್ಲಿ ಮಹಿಳೆಯರು ಒಳಗೆ ಪ್ರವೇಶ ಮಾಡುವಂತಿಲ್ಲ ಎಂಬ ಕಾರಣ ನೀಡಿತ್ತು. ಕೇವಲ ಹಾಜಿ ದರ್ಗಾವೊಂದೇ ಅಲ್ಲ ಮುಂಬೈನ 20 ರಲ್ಲಿ 7 ದರ್ಗಾಗಳಿಗೆ ಮಹಿಳೆಯ ಪ್ರವೇಶವನ್ನು ನಿಷೇಧಿಸಲಾಗಿತ್ತು.
ಈ ಬಗ್ಗೆ ಮಹಿಳೆಯರು ಪ್ರತಿಭಟನೆ ನಡೆಸಿದ್ದರು. ನೂರ್ ಜಹಾನ್ ಸಫಿಯಾ ಹೈಕೋರ್ಟ್ ಮೊರೆ ಹೋಗಿದ್ದರು. ಒಂದು ಹಂತದಲ್ಲಿ ಪರಸ್ಪರ ಮಾತುಕತೆ ಮೂಲಕ ಪ್ರಕರಣ ಬಗೆಹರಿಸಿಕೊಳ್ಳುವಂತೆ ಕೋರ್ಟ್ ಹೇಳಿತ್ತು. ಆದ್ರೆ ದರ್ಗಾ ಪ್ರವೇಶಕ್ಕೆ ಆಡಳಿತ ಮಂಡಳಿ ಒಪ್ಪಿಕೊಂಡಿರಲಿಲ್ಲ.