ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಪ್ರಸಕ್ತ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಈಗಾಗಲೇ ನಾಲ್ಕು ಶತಕಗಳನ್ನು ಕೊಹ್ಲಿ ದಾಖಲಿಸಿದ್ದಾರೆ. ಈಗ ಕೊಹ್ಲಿ ಹಿರಿಮೆಗೆ ಮತ್ತೊಂದು ಗರಿ ಮೂಡಿದೆ.
ಬುಧವಾರದಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ದದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ 113 ರನ್ ಗಳಿಸಿದ್ದು, ಆ ಮೂಲಕ ಐಪಿಎಲ್ ಪಂದ್ಯಗಳಲ್ಲಿ 4000 ರನ್ ಪೂರೈಸಿದ ಮೊದಲ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
136 ಐಪಿಎಲ್ ಪಂದ್ಯಗಳಿಂದ ಒಟ್ಟು 4002 ರನ್ ಗಳಿಸಿರುವ ವಿರಾಟ್ ಕೊಹ್ಲಿ 37.75 ಸರಾಸರಿಯನ್ನು ಹೊಂದಿದ್ದಾರೆ. ಈ ರನ್ ಪೈಕಿ ನಾಲ್ಕು ಸೆಂಚುರಿ ಹಾಗೂ 24 ಅರ್ಧ ಸೆಂಚುರಿ ಸೇರಿದೆ. ಎರಡನೇ ಸ್ಥಾನದಲ್ಲಿ ಸುರೇಶ್ ರೈನಾ ಅವರಿದ್ದು, 143 ಪಂದ್ಯಗಳಿಂದ 3985 ರನ್ ಗಳಿಸುವ ಮೂಲಕ 33.48 ಸರಾಸರಿ ಹೊಂದಿದ್ದಾರೆ. ಈ ಪೈಕಿ 1 ಸೆಂಚುರಿ ಹಾಗೂ 26 ಅರ್ಧ ಸೆಂಚುರಿಗಳಿವೆ. ಮೂರನೇ ಸ್ಥಾನದಲ್ಲಿ ರೋಹಿತ್ ಶರ್ಮಾ ಇದ್ದು, 141 ಪಂದ್ಯಗಳಿಂದ 3844 ರನ್ ಬಾರಿಸಿದ್ದಾರೆ. 33.71 ಸರಾಸರಿ ಹೊಂದಿರುವ ರೋಹಿತ್ ಶರ್ಮಾ 1 ಸೆಂಚುರಿ ಹಾಗೂ 29 ಅರ್ಧ ಸೆಂಚುರಿ ಗಳಿಸಿದ್ದಾರೆ.