ಬೆಂಗಳೂರು: ಮೊದಲನೇ ಹಂತದಲ್ಲಿ ರಾಜಕಾಲುವೆ ಒತ್ತುವರಿ ತೆರವುಗೊಳಿಸಿದ ಬಿ.ಬಿ.ಎಂ.ಪಿ., ಶೀಘ್ರವೇ 2 ನೇ ಹಂತದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆಸಲು ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.
ಮೇಯರ್ ಮಂಜುನಾಥ ರೆಡ್ಡಿ ಸುದ್ದಿಗಾರರಿಗೆ ಮಾಹಿತಿ ನೀಡಿದ್ದು, ರಾಜಕಾಲುವೆ ಒತ್ತುವರಿ ಪ್ರದೇಶದಲ್ಲಿರುವ ನಟ ದರ್ಶನ್ ಅವರ ಮನೆ, ಮಾಜಿ ಸಚಿವರಾದ ಶಾಮನೂರು ಶಿವಶಂಕರಪ್ಪ ಅವರ ಎಸ್.ಎಸ್.ಎಂ. ಆಸ್ಪತ್ರೆಯನ್ನು ತೆರವುಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ದರ್ಶನ್ ನಿವಾಸ ಮತ್ತು ಶಾಮನೂರು ಶಿವಶಂಕರಪ್ಪ ಅವರ ಆಸ್ಪತ್ರೆ ಕಟ್ಟಡ ಒತ್ತುವರಿಯಾಗಿರುವ ಬಗ್ಗೆ ವರದಿ ನೀಡಿದ್ದಾರೆ ಎಂದು ಹೇಳಿದ್ದಾರೆನ್ನಲಾಗಿದೆ.
ದರ್ಶನ್ ಅವರ ಸಹೋದರ ದಿನಕರ್, ತಾವೇ ತೆರವುಗೊಳಿಸುವುದಾಗಿ ತಿಳಿಸಿದ್ದರಿಂದ ಕಾಲಾವಕಾಶ ನೀಡಲಾಗಿದೆ. ಅವರು ತೆರವು ಮಾಡದಿದ್ದರೆ, ಬಿ.ಬಿ.ಎಂ.ಪಿ. ಯಿಂದಲೇ ತೆರವು ಮಾಡಲಾಗುವುದು ಎಂದು ಮೇಯರ್ ಹೇಳಿದ್ದಾರೆ.
ಬಿ.ಬಿ.ಎಂ.ಪಿ. ಆಯುಕ್ತ ಮಂಜುನಾಥ್ ಪ್ರಸಾದ್ ಅವರು, ರಾಜಕಾಲುವೆ ಯಾರೇ ಒತ್ತುವರಿ ಮಾಡಿದ್ದರೂ, ತೆರವುಗೊಳಿಸಲಾಗುವುದು. ಇದರಲ್ಲಿ ಜನಸಾಮಾನ್ಯರು, ಬಿಲ್ಡರ್ ಗಳು, ದರ್ಶನ್ ನಿವಾಸ ಎಂದು ಬೇಧ ಮಾಡುವುದಿಲ್ಲ. ಕಂದಾಯ ಇಲಾಖೆ ಸರ್ವೇ ಕಾರ್ಯ ಮುಗಿಸಿದ ನಂತರ, 2 ನೇ ಹಂತದ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ.