ಮಡಿಕೇರಿ: ಪಾಕಿಸ್ತಾನ ನರಕವಲ್ಲ, ಅಲ್ಲಿನ ಜನ ಶಾಂತ ರೀತಿಯಿಂದ ಕಾಣುತ್ತಾರೆ ಎಂದು ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಹೇಳಿಕೆ ನೀಡಿದ್ದನ್ನು ವಿರೋಧಿಸಿ ನ್ಯಾಯಾಲಯಕ್ಕೆ ದೂರು ನೀಡಲಾಗಿದೆ.
ಕೊಡಗು ಜಿಲ್ಲೆಯ ಸೋಮವಾರ ಪೇಟೆಯ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ರಮ್ಯಾ ಅವರ ವಿರುದ್ಧ ದೂರು ದಾಖಲಾಗಿದ್ದು, ಆಗಸ್ಟ್ 27ಕ್ಕೆ ವಿಚಾರಣೆ ನಡೆಯಲಿದೆ ಎನ್ನಲಾಗಿದೆ. ಕೊಡಗು ಪ್ರಗತಿ ರಂಗ ಸಂಘಟನೆಯ ಪ್ರಮುಖ ಹಾಗೂ ವಕೀಲರಾದ ವಿಠಲ ಗೌಡ ಅವರು ದೂರು ನೀಡಿದ್ದು, ಅದನ್ನು ನ್ಯಾಯಾಲಯ ವಿಚಾರಣೆಗೆ ಅಂಗೀಕರಿಸಿದೆ. ಅಲ್ಲದೇ, ಆಗಸ್ಟ್ 27ಕ್ಕೆ ವಿಚಾರಣೆಯನ್ನು ನಡೆಸಲಿದೆ ಎಂದು ಹೇಳಲಾಗಿದೆ. ರಮ್ಯಾ ಅವರು ಪಾಕ್ ಬಗ್ಗೆ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಪಾಕಿಸ್ತಾನಕ್ಕೆ ಹೋದರೆ ನರಕಕ್ಕೆ ಹೋದಂತೆ ಎಂದು ಹೇಳಿದ್ದರು. ಅದಕ್ಕೆ ರಮ್ಯಾ ಪ್ರತಿಕ್ರಿಯಿಸಿ, ಪಾಕಿಸ್ತಾನ ನರಕವೇನಲ್ಲ, ಅಲ್ಲಿನ ಜನ ಒಳ್ಳೆಯವರು ಎಂದು ಹೇಳಿದ್ದರು. ಈ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಈಗ ಅವರ ವಿರುದ್ಧ ಕೋರ್ಟ್ ಗೆ ದೂರು ನೀಡಲಾಗಿದೆ ಎಂದು ಹೇಳಲಾಗಿದೆ.