ಬೆಂಗಳೂರು: ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ದೇಶದ್ರೋಹಿಗಳನ್ನು ಬಂಧಿಸುವಂತೆ ಆಗ್ರಹಿಸಿ, ಎ.ಬಿ.ವಿ.ಪಿ. ಹಮ್ಮಿಕೊಂಡಿರುವ ಹೋರಾಟದಲ್ಲಿ ಸ್ಯಾಂಡಲ್ ವುಡ್ ನಟ ಹಾಗೂ ಬಿ.ಜೆ.ಪಿ. ಮುಖಂಡ ಜಗ್ಗೇಶ್ ಭಾಗವಹಿಸಿದ್ದಾರೆ.
ಈ ಸಂದರ್ಭದಲ್ಲಿ ಜಗ್ಗೇಶ್, ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರಿಗೆ ಟಾಂಗ್ ಕೊಟ್ಟಿದ್ದಾರೆ ಎನ್ನಲಾಗಿದೆ. ಪಾಕಿಸ್ತಾನಕ್ಕೆ ಹೋಗುವುದು ಒಂದೇ, ನರಕಕ್ಕೆ ಹೋಗುವುದು ಒಂದೇ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಕ್ಕೆ ರಮ್ಯಾ ಪ್ರತಿಕ್ರಿಯೆ ನೀಡಿ, ಪಾಕಿಸ್ತಾನ ನರಕವಲ್ಲ, ಅಲ್ಲಿನ ಜನ ಒಳ್ಳೆಯವರು, ಶಾಂತಿ, ಪ್ರೀತಿಯಿಂದ ಕಾಣುತ್ತಾರೆ ಎಂದಿದ್ದಾರೆ. ಹೀಗೆ ರಮ್ಯಾ ಅವರು ನೀಡಿದ ಹೇಳಿಕೆಗೆ ಜಗ್ಗೇಶ್, ತಮ್ಮದೇ ಧಾಟಿಯಲ್ಲಿ ಟಾಂಗ್ ಕೊಟ್ಟಿದ್ದಾರೆ ಎನ್ನಲಾಗಿದೆ.
ಅನುಭವ ಇಲ್ಲದವರೆಲ್ಲಾ ಪಾಕಿಸ್ತಾನವನ್ನು ಹೊಗಳುತ್ತಾರೆ. ಕೇವಲ ಓಟ್ ಬ್ಯಾಂಕ್ ಗಾಗಿ ಶತ್ರು ರಾಷ್ಟ್ರವನ್ನು ಹೊಗಳುತ್ತಾರೆ. ಬಹುಶಃ ಅವರಿಗೆ ಶಾಂತಿ ಪ್ರಶಸ್ತಿ ಸಿಗಬಹುದೇನೋ ? ಅವರು ಬೇಕಾದರೆ ಬಿಲ್ ಕ್ಲಿಂಟನ್ ಜೊತೆಗೆ ಫೋಟೋ ತೆಗೆಸಿಕೊಳ್ಳಲಿ. ಅವರು ಅನುಭವಿಗಳು. ಅವರಿಗೆ ಒಳ್ಳೆಯದಾಗಲಿ ಎಂದು ಜಗ್ಗೇಶ್ ಹೇಳಿದ್ದಾರೆ ಎನ್ನಲಾಗಿದೆ.