ಡಮಾಸ್ಕಸ್: ಸದಾ ಕಾಲ ಉದ್ವಿಗ್ನ ಸ್ಥಿತಿ ಇರುವ ಸಿರಿಯಾದಲ್ಲಿ ನಿರಂತರವಾಗಿ ಬಾಂಬ್ ದಾಳಿ ನಡೆಯುತ್ತಿವೆ ಸೇನೆ ಮತ್ತು ಉಗ್ರರ ನಡುವಿನ ಕಾದಾಟದಲ್ಲಿ ಜನ ಹೈರಾಣಾಗಿದ್ದಾರೆ.
ಇತ್ತೀಚೆಗಷ್ಟೇ ದಾಳಿಗೆ ಸಿಲುಕಿದ್ದ ಬಾಲಕನೊಬ್ಬನ ಫೋಟೋ ವಿಶ್ವದಾದ್ಯಂತ ಸುದ್ದಿಯಾಗಿತ್ತು. ಆತನ ಫೋಟೋ ಸಿರಿಯಾದ ಪರಿಸ್ಥಿತಿಯ ಭಯಾನಕತೆಯನ್ನು ಬಿಂಬಿಸುವಂತಿತ್ತು. ಸಿರಿಯಾದ ಅಲೆಪ್ಪೋ ನಗರದ ಮೇಲೆ ರಷ್ಯಾ ಸೇನೆ ನಡೆಸಿದ್ದ ವಾಯುದಾಳಿಯಲ್ಲಿ ಇಡೀ ಊರೇ ರಣರಂಗದಂತಾಗಿತ್ತು. ಇಲ್ಲಿನ ಅವಶೇಷಗಳಡಿ ಸಿಲುಕಿದ್ದ 5 ವರ್ಷದ ಬಾಲಕ ಉಮ್ರಾನ್ ನನ್ನು ರಕ್ಷಿಸಲಾಗಿತ್ತು. ರಕ್ತಸಿಕ್ತನಾಗಿ ಕುರ್ಚಿಯ ಮೇಲೆ ಕುಳಿತಿದ್ದ ಉಮ್ರಾನ್ ಸಿರಿಯಾದ ವಾಸ್ತವತೆಯ ಪ್ರತಿರೂಪವನ್ನು ಬಿಂಬಿಸಿದ್ದ.
ಈತನನ್ನು ಕಂಡವರೆಲ್ಲಾ ಮರುಕ ಪಟ್ಟಿದ್ದರು. ಅಂದಿನ ಘಟನೆಯಲ್ಲಿ ಉಮ್ರಾನ್ ಜೊತೆಗೆ ಆತನ ಅಣ್ಣ 10 ವರ್ಷದ ಅಲಿ, ಆತನ ತಾಯಿ ಮತ್ತು ಸಹೋದರಿಯನ್ನು ರಕ್ಷಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಲಿ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.