ಚೀನಾದ ಈ ಯುವಕನಿಗೆ ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮಾ ಅವರಂತಿರುವುದೇ ಪ್ಲಸ್ ಪಾಯಿಂಟ್ ಆಗಿದ್ದು, ಸಾರ್ವಜನಿಕ ವೇದಿಕೆಗಳಲ್ಲಿ ಬರಾಕ್ ಒಬಾಮಾರನ್ನು ಅನುಕರಿಸುವ ಮೂಲಕ ಮನರಂಜನೆ ನೀಡಿ ಹಣ ಗಳಿಸುತ್ತಿದ್ದಾನೆ.
ಚೀನಾದ 29 ವರ್ಷದ ಕ್ಸಿಯೋ ಜಿಗೋ ಹಾಡುಗಾರಿಕೆಯಲ್ಲಿ ಆಸಕ್ತಿ ಹೊಂದಿದ್ದ. ಈತ ಹಾಡುವ ವೇಳೆ ಅದನ್ನು ತನ್ನ ಮೊಬೈಲಿನಲ್ಲಿ ಚಿತ್ರೀಕರಿಸಿಕೊಂಡಿದ್ದ ಆತನ ಸ್ನೇಹಿತ ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ್ದ. ಇದನ್ನು ನೋಡಿದವರೆಲ್ಲ ಡಿಟ್ಟೋ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾರಂತಿದ್ದಾನೆ ಎಂದು ಕಮೆಂಟ್ ಹಾಕಿದ್ದು, ಈತನ ಅದೃಷ್ಟವನ್ನೇ ಬದಲಾಗುವಂತೆ ಮಾಡಿತು.
ಅಂದಿನಿಂದ ಬರಾಕ್ ಒಬಾಮಾರ ಭಾಷಣ ಸೇರಿದಂತೆ ಅವರ ವಿಡಿಯೋಗಳನ್ನು ನೋಡಿದ ಕ್ಸಿಯೋ ಜಿಗೋ ಅವರನ್ನು ನಕಲು ಮಾಡಲಾರಂಭಿಸಿದ. ಇದರಿಂದಾಗಿ ಸ್ವಲ್ಪ ಆದಾಯವೂ ಬರತೊಡಗಿತು. ಚೀನಾದ ದೃಶ್ಯ ಮಾಧ್ಯಮವೊಂದು ಈತನ ಕುರಿತು ಕಾರ್ಯಕ್ರಮವೊಂದನ್ನು ಪ್ರಸಾರ ಮಾಡಿದ ಬಳಿಕ ಈತ ಸಕತ್ ಫೇಮಸ್ ಆಗಿದ್ದು, ಈಗ ಬಾರಿ ಬೇಡಿಕೆ ಬರುತ್ತಿರುವ ಕಾರಣ ಹೆಚ್ಚು ಹಣ ಗಳಿಸುತ್ತಿದ್ದಾನೆ. ಇದಕ್ಕಾಗಿ ಈತ ಇಂಗ್ಲೀಷನ್ನೂ ಕಲಿತಿದ್ದಾನೆ.