ಗಂಡು ಮಗುವಿಗೆ ಜನ್ಮ ನೀಡಲಿಲ್ಲವೆಂಬ ಕಾರಣಕ್ಕಾಗಿ ತಮ್ಮ ಕಣ್ಣ ಮುಂದೆಯೇ ತಾಯಿಯನ್ನು ಜೀವಂತವಾಗಿ ದಹಿಸಿದರೂ ನ್ಯಾಯ ಸಿಗದ ಕಾರಣ ಉತ್ತರ ಪ್ರದೇಶದ ಈ ಪುಟ್ಟ ಬಾಲೆಯರು ತಮ್ಮ ರಕ್ತದಿಂದ ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ಅವರಿಗೆ ಪತ್ರ ಬರೆದಿದ್ದಾರೆ.
ಬುಲಂದ್ ಶಹರ್ ನ 15 ವರ್ಷದ ಬಾಲಕಿ ಲತಿಕಾ ಬನ್ಸಾಲ್ ಹಾಗೂ ಆಕೆಯ ಸಹೋದರಿ 11 ವರ್ಷದ ತನ್ಯಾ ಬನ್ಸಾಲ್, ನ್ಯಾಯ ಕೋರಿ ತಮ್ಮ ರಕ್ತದಿಂದ ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ಅವರಿಗೆ ಪತ್ರ ಬರೆದಿದ್ದು, 2016 ರ ಜೂನ್ 14 ರಂದು ತಮ್ಮಗಳನ್ನು ಕೋಣೆಯಲ್ಲಿ ಕೂಡಿ ಹಾಕಿ ನಮ್ಮ ತಾಯಿಯನ್ನು, ತಂದೆ ಮತ್ತವರ ಕುಟುಂಬ ಸದಸ್ಯರು ಹತ್ಯೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಈ ಕುರಿತು ತಾವು ಪೊಲೀಸರ ಮುಂದೆ ಹೇಳಿಕೆ ನೀಡಿದ್ದರೂ ತಂದೆಯನ್ನು ಮಾತ್ರ ಬಂಧಿಸಿ ಜೈಲಿಗೆ ಕಳುಹಿಸಿರುವ ಪೊಲೀಸರು, ಈ ಹತ್ಯೆಗೆ ಸಹಕರಿಸಿದ್ದ ಇತರರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದ್ದಾರೆ. ಸದ್ಯ ತಾತಾನ ಮನೆಯಲ್ಲಿರುವ ಈ ಮಕ್ಕಳು, ತಮ್ಮ ತಾಯಿಯ ಸಾವಿಗೆ ಕಾರಣರಾದ ಇನ್ನಿತರರ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ತಮಗೆ ರಕ್ಷಣೆ ನೀಡಬೇಕೆಂದು ರಕ್ತದಲ್ಲಿ ಬರೆದ ಪತ್ರದಲ್ಲಿ ಮನವಿ ಮಾಡಿದ್ದು, ಇದಕ್ಕೆಸ್ಪಂದಿಸಿರುವ ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್, ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆದೇಶಿಸಿದ್ದಾರೆ. ಅದರಂತೆ ಈಗ ಬಾಲಕಿಯರಿಗೆ ರಕ್ಷಣೆ ನೀಡಲಾಗಿದ್ದು, ಪ್ರಕರಣದ ತನಿಖೆಯನ್ನು ಮತ್ತೊಮ್ಮೆ ಕೈಗೊಳ್ಳಲಾಗಿದೆ.