ರಾತ್ರಿ ವೇಳೆ ಹೆದ್ದಾರಿಗಳಲ್ಲಿ ಸಂಚರಿಸುವಾಗ ರೇಡಿಯಂ ಫಲಕಗಳು ನಮಗೆ ಎಷ್ಟು ಸಹಾಯ ಮಾಡುತ್ತವೆ ಅಲ್ಲವಾ? ತಿರುವುಗಳಲ್ಲಿ, ಹಂಪ್ ಗಳಲ್ಲಿ ಹೀಗೆ ಮುಂತಾದ ಕಡೆಗಳಲ್ಲಿರುವ ರೇಡಿಯಂ ಫಲಕಗಳು ನಮಗೆ ಸುರಕ್ಷಿತ ಚಾಲನೆಗೆ ಅನುವು ಮಾಡಿಕೊಡುತ್ತವೆ.
ಇಷ್ಟೆಲ್ಲ ಸೂಚನಾ ಫಲಕಗಳು ಇದ್ದರೂ ಕೆಲವೊಮ್ಮೆ ರಾತ್ರಿಯ ಸಮಯದಲ್ಲಿ ರಸ್ತೆಯ ಮೇಲೆ ಮಲಗಿರುವ ಹಸುಗಳು ಅಥವಾ ಇನ್ಯಾವುದೋ ಪ್ರಾಣಿಗಳು, ವಾಹನಗಳ ಅಪಘಾತಕ್ಕೆ ಕಾರಣವಾಗುತ್ತವೆ. ಪ್ರಾಣಿಗಳ ಸಾವಿನೊಂದಿಗೆ ವಾಹನದಲ್ಲಿ ಪ್ರಯಾಣಿಸುತ್ತಿರುವವರ ಪ್ರಾಣಕ್ಕೂ ಕುತ್ತು ಬರುತ್ತದೆ.
ಇಂತಹ ಅವಘಡಗಳನ್ನು ತಪ್ಪಿಸಲು ಮಧ್ಯಪ್ರದೇಶದ ಛತ್ರಾಪುರ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತರ ತಂಡವೊಂದು ಹೊಸ ಶೋಧನೆ ಮಾಡಿದೆ. ಅದೇ ರೇಡಿಯಂ ಬೆಲ್ಟ್. ಗೋರಕ್ಷಣೆಗೆ ಮುಂದಾಗಿರುವ ಇವರು, ಹೆದ್ದಾರಿಯಲ್ಲಿ ಮಲಗಿ ವಾಹನಗಳಿಂದ ಸಾವನ್ನಪ್ಪುವ ಹಸುಗಳ, ತನ್ಮೂಲಕ ಸಂಚಾರಿಗಳ ರಕ್ಷಣೆಗೆ ಮುಂದಾಗಿದ್ದಾರೆ. ಹಸುಗಳಿಗೆ ರೇಡಿಯಂ ಬೆಲ್ಟ್ ಹಾಕುವುದರ ಮೂಲಕ ಅನಾಹುತಗಳನ್ನು ತಪ್ಪಿಸಬಹುದೆಂದು ಇವರು ಹೇಳುತ್ತಿದ್ದಾರೆ. ರೇಡಿಯಂ ಬೆಲ್ಟ್ ಮೂಲಕ ವಾಹನ ಚಾಲಕರಿಗೆ ರಸ್ತೆಯ ಮೇಲೆ ಮಲಗಿರುವ ಪ್ರಾಣಿಗಳ ಮುನ್ಸೂಚನೆ ಸಿಗುತ್ತದೆ. ಇದರಿಂದ ಮುಂದಾಗುವ ಅನಾಹುತ ತಪ್ಪಿಸಬಹುದೆಂದು ಸಾಮಾಜಿಕ ಕಾರ್ಯಕರ್ತರ ತಂಡ ಹೇಳಿದೆ.