2014 ರಲ್ಲಿ ಸಚಿವ ಆಜಂ ಖಾನ್ ರವರಿಗೆ ಸೇರಿದ್ದ 7 ಕೋಣಗಳು ಕಳೆದುಹೋಗಿದ್ದ ವೇಳೆ ಮುತುವರ್ಜಿ ವಹಿಸಿ ಅವುಗಳನ್ನು ಹುಡುಕಿಕೊಡುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದ ಉತ್ತರ ಪ್ರದೇಶದ ಪೊಲೀಸರಿಗೆ ಈಗ ಮತ್ತೊಂದು ಅಂತಹುದೇ ಕೆಲಸ ಹುಡುಕಿಕೊಂಡು ಬಂದಿದೆ.
ಹೌದು, ಈಗ ಕೇಂದ್ರದ ಮಾಜಿ ಸಚಿವ ರಾಮ್ ಶಂಕರ್ ಕಥಾರಿಯಾ ಅವರಿಗೆ ಸೇರಿದ್ದ ‘ಕಾಳು’ ಎಂಬ ಹೆಸರಿನ ಕಪ್ಪು ಬಣ್ಣದ ಲ್ಯಾಬ್ರೆಡಾರ್ ನಾಯಿ ಕಳೆದುಹೋಗಿದ್ದು, ಅದನ್ನು ಹುಡುಕಿಕೊಡುವಂತೆ ಕೋರಿ ಮಾಜಿ ಸಚಿವರ ಪತ್ನಿ ಮೃದುಲಾ, ಆಗ್ರಾದ ಹರಿಪರ್ವತ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಕಳೆದ ಮೂರು ದಿನಗಳಿಂದ ನಾಯಿ ಕಾಣೆಯಾಗಿರುವುದು ಕುಟುಂಬ ಸದಸ್ಯರಲ್ಲಿ ಬೇಸರ ಮೂಡಿಸಿದೆ. ಅಲ್ಲದೇ ‘ಕಾಳು’ ವಿನ ಜೊತೆಗಾರ ಮತ್ತೊಂದು ನಾಯಿ ‘ಭೂರಾ’ ಮೂರು ದಿನಗಳಿಂದ ಊಟವನ್ನೇ ಸೇವಿಸಿಲ್ಲವೆಂದಿರುವ ಮೃದುಲಾ, ಆಜಂ ಖಾನ್ ಅವರ ಕೋಣಗಳನ್ನು ಹುಡುಕಿಕೊಟ್ಟಿದ್ದ ಪೊಲೀಸರಿಗೆ ನಮ್ಮ ನಾಯಿ ಪತ್ತೆ ಹಚ್ಚುವುದು ಕಷ್ಟವಾಗುವುದಿಲ್ಲವೆಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.