ಗುಜರಾತಿನ ಗಾಂಧಿನಗರದಿಂದ 20 ಕಿ.ಮೀ. ದೂರವಿರುವ ಝುಲಾಸನ ಹಳ್ಳಿಯಲ್ಲಿ ಒಂದು ಮುಸ್ಲಿಂ ಮಹಿಳೆಯನ್ನು ದೇವಿಯ ತರಹ ಪೂಜಿಸುತ್ತಾರೆ. ಹಾಗಂತ ಇಲ್ಲಿ ಯಾರೊಬ್ಬರೂ ಮುಸ್ಲಿಂ ಸಮುದಾಯಕ್ಕೆ ಸೇರಿದವರಿಲ್ಲ.
ದೇಶದ ಹಲವೆಡೆ ಹಿಂದೂ- ಮುಸ್ಲಿಂ ಘರ್ಷಣೆಗಳು ನಡೆಯುತ್ತಿದ್ದರೂ ಝುಲಾಸನ ಹಳ್ಳಿಯವರು ಮಾತ್ರ ತಮ್ಮ ಮುಸ್ಲಿಂ ದೇವಿ ‘ಡೋಲಾ ಮಾತಾ’ಳ ಪೂಜೆ ಬಿಟ್ಟಿಲ್ಲ. ಹೆಮ್ಮೆಯ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಕೂಡ ಅಂತರಿಕ್ಷಕ್ಕೆ ತೆರಳುವ ಮುನ್ನ ತಮ್ಮ ತಂದೆ ದೀಪಕ್ ಪಾಂಡ್ಯಾ ಅವರೊಡನೆ ಈ ದೇವಿಯ ಆಶೀರ್ವಾದ ಪಡೆದಿದ್ದರು. ಏಕೆಂದರೆ ಸುನಿತಾ ಅವರ ತಂದೆ 22 ವರ್ಷ ಇದೇ ಹಳ್ಳಿಯಲ್ಲೇ ಇದ್ದರು. ಅವರು ಕೂಡ ಈ ದೇವಿಯ ಆರಾಧಕರಾಗಿದ್ದಾರೆ.
ಯಾರು ಈ ಡೋಲಾದೇವಿ?
ಡೋಲಾ ಒಬ್ಬ ಮುಸ್ಲಿಂ ಮಹಿಳೆಯಾಗಿದ್ದಳು. ಒಮ್ಮೆ ಅವಳು ಝುಲಾಸನ ಹಳ್ಳಿಯಲ್ಲಿ ಹಾದುಹೋಗುತ್ತಿರುವಾಗ ಅಲ್ಲಿ ಕಳ್ಳತನ ನಡೆಯುತ್ತಿತ್ತು. ಇದನ್ನು ನೋಡಿದ ಡೋಲಾದೇವಿ ಕಳ್ಳರ ಜೊತೆ ಹೋರಾಡಿ ಅವರನ್ನು ಸಾಯಿಸಿ ತಾನೂ ಸತ್ತಳಂತೆ. ಅವಳು ಸತ್ತ ಜಾಗದಲ್ಲಿಯೇ ಈಗ ಡೋಲಾದೇವಿಯ ಗುಡಿ ಇದೆ. ಹಳ್ಳಿಯ ಜನರೆಲ್ಲರೂ ಅವಳನ್ನು ಊರಿನ ರಕ್ಷಕಿಯಂತೆ ಕಾಣುತ್ತಾರೆ.
ಈ ಹಳ್ಳಿಯಲ್ಲಿ ಸುಮಾರು 5000 ಜನರಿದ್ದಾರೆ. ಎಲ್ಲರ ಮನೆಯಲ್ಲೂ ಕನಿಷ್ಟ ಒಬ್ಬರಾದರೂ ವಿದೇಶದಲ್ಲಿ ನೆಲೆಸಿದ್ದಾರೆ. ಹಾಗೆ ವಿದೇಶದಲ್ಲಿ ನೆಲೆಸಿದವರೂ ಕೂಡ ಡೋಲಾದೇವಿಯ ಆಶೀರ್ವಾದ ಪಡೆಯದೇ ಮನೆ ಪ್ರವೇಶಿಸುವುದಿಲ್ಲ.
2002 ರಲ್ಲಿ ಉತ್ತರ ಗುಜರಾತದಲ್ಲಿ ಅನೇಕ ದಂಗೆಗಳಾದವು. ಹಲವಾರು ಮಂದಿರ, ಮಸೀದಿಗಳು ಧ್ವಂಸಗೊಂಡವು. ಆದರೆ ಯಾರೊಬ್ಬರೂ ಡೋಲಾದೇವಿಯ ಗುಡಿಯನ್ನು ಹಾಳು ಮಾಡುವ ಯತ್ನಕ್ಕೆ ಕೈ ಹಾಕಲಿಲ್ಲ.