ಪಾಕಿಸ್ತಾನದ ಬಣ್ಣ ಮತ್ತೊಮ್ಮೆ ಬಟಾಬಯಲಾಗಿದೆ. ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಮುಂದಾಗುವ ಉಗ್ರರಿಗೆ ಪಾಕ್ ನಲ್ಲಿ ತರಬೇತಿ ಶಿಬಿರಗಳನ್ನು ನಡೆಸುತ್ತಿರುವ ವಿಚಾರ ಗೊತ್ತಿದ್ದರೂ ಅದಕ್ಕೆ ತಡೆಯೊಡ್ಡಲು ಮುಂದಾಗದ ಪಾಕ್, ಇದೀಗ ಭಾರತೀಯ ಯೋಧರಿಂದ ಹತ್ಯೆಗೀಡಾಗಿದ್ದ ಉಗ್ರನ ಪೋಸ್ಟರ್ ಅನ್ನು ತನ್ನ ರೈಲಿನ ಮೇಲೆ ಪ್ರದರ್ಶಿಸುವ ಮೂಲಕ ಭಂಡತನ ತೋರಿದೆ.
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದ್ದ 21 ವರ್ಷದ ಬುಹ್ರಾನ್ ಮುಜಫರ್ ವಾನಿಯನ್ನು ಜುಲೈ 8 ರಂದು ನಡೆದ ಕಾರ್ಯಾಚರಣೆಯಲ್ಲಿ ಭಾರತೀಯ ಯೋಧರು ಹತ್ಯೆಗೈದಿದ್ದರು. ಇದಾದ ಬಳಿಕ ಕಾಶ್ಮೀರ ಕಣಿವೆಯಲ್ಲಿ ಪ್ರಕ್ಷುಬ್ದ ವಾತಾವರಣ ತಲೆದೋರಿದ್ದು, ಹಲವಾರು ಮಂದಿ ಸಾವನ್ನಪ್ಪಿದ್ದಾರೆ.
ಈ ಗಲಭೆಗೆ ಮತ್ತಷ್ಟು ಕುಮ್ಮಕ್ಕು ನೀಡುವಂತಹ ಹೇಳಿಕೆಗಳನ್ನು ಪಾಕಿಸ್ತಾನದ ಚುನಾಯಿತ ಪ್ರತಿನಿಧಿಗಳು ನೀಡಿದ್ದು, ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬುಹ್ರಾನ್ ವಾನಿಯನ್ನು ಹುತಾತ್ಮನಂತೆ ಬಿಂಬಿಸಲು ಹೊರಟಿದ್ದಾರೆ. ಪಾಕಿಸ್ತಾನದ ‘ಆಜಾದಿ ಎಕ್ಸ್ ಪ್ರೆಸ್’ ರೈಲಿನ ಬೋಗಿ ಮೇಲೆ ಬುಹ್ರಾನ್ ವಾನಿಯ ಪೋಸ್ಟರ್ ಅನ್ನು ಪ್ರದರ್ಶಿಸಲಾಗಿದ್ದು, ಇದಕ್ಕೆ ಸರ್ಕಾರದ ಸಮ್ಮತಿಯೂ ಇದೆ ಎನ್ನಲಾಗಿದೆ.