ಬೆಂಗಳೂರು: ಜೀವನದಲ್ಲಿ ಒಮ್ಮೆಯಾದರೂ, ಜೋಗ ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕೆಂಬ ಮಾತು ಪ್ರಚಲಿತದಲ್ಲಿದೆ. ಆದರೆ, ಬೇಸಿಗೆಯಲ್ಲಿ ಬರುವ ಪ್ರವಾಸಿಗರಿಗೆ ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಆಗುವುದಿಲ್ಲ.
ಮಳೆಗಾಲದಲ್ಲಿ ಪ್ರಕೃತಿ ಸೌಂದರ್ಯವನ್ನೇ ಮೈವೆತ್ತಿ ನಿಂತ ಜೋಗ, ಬೇಸಿಗೆ ಕಾಲದಲ್ಲಿ ಬಣಗುಡುತ್ತದೆ. ಹಾಗಾಗಿ, ಮಳೆಗಾಲದಲ್ಲಿ ಜೋಗ ನೋಡಲು ಪ್ರವಾಸಿಗರು ಮುಗಿ ಬೀಳುತ್ತಾರೆ. ಬೇಸಿಗೆಯಲ್ಲಿ ನೋಡಲು ಬಂದರೂ, ಜಲಧಾರೆಯ ವೈಭವ ಕಾಣ ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ಜೋಗವನ್ನು ಸರ್ವಋತು ಪ್ರವಾಸಿ ಕೇಂದ್ರವಾಗಿ ರೂಪಿಸಲು ಯೋಜಿಸಲಾಗಿದೆ. ಜೋಗದ ಜಲಧಾರೆಗಳು ವರ್ಷವಿಡೀ ಧುಮ್ಮಿಕ್ಕುವಂತೆ ಮಾಡಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ.
ಜಲಪಾತದಲ್ಲಿ ಹರಿದು ಹೋಗುವ ನೀರನ್ನು ಮರುಬಳಕೆ ಮಾಡಿಕೊಂಡು ವರ್ಷವಿಡಿ ಜೋಗದ ಸೌಂದರ್ಯ ವೀಕ್ಷಿಸುವಂತೆ ಮಾಡಲಾಗುವುದು. ಹಾಗಾದಲ್ಲಿ ರಾಜ, ರಾಣಿ, ರೋರರ್, ರಾಕೆಟ್ ಜಲಧಾರೆಗಳು ಸರ್ವಋತು ಜಲಪಾತಗಳಾಗಿ ಕಾಣಸಿಗಲಿವೆ.