ಮೊಹಾಲಿ: ಸೌತ್ ಆಫ್ರಿಕಾದಲ್ಲಿ 2007 ರಲ್ಲಿ ನಡೆದಿದ್ದ, ಐಸಿಸಿ ವಿಶ್ವಕಪ್ ಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ, ಭಾರತ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್, ಅಮೋಘ ದಾಖಲೆ ಬರೆದಿದ್ದರು.
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಯುವರಾಜ್ ಸಿಂಗ್, ಒಂದೇ ಓವರ್ ನಲ್ಲಿ ಸತತ 6 ಸಿಕ್ಸರ್ ಬಾರಿಸಿ ದಾಖಲೆ ಬರೆದಿದ್ದರು. ಇತ್ತೀಚೆಗೆ ಈ ಬಗ್ಗೆ ಹೇಳಿಕೊಂಡಿದ್ದ ಯುವರಾಜ್, ಇಂಗ್ಲೆಂಡ್ ಆಟಗಾರ ಕೆಣಕ್ಕಿದ್ದರಿಂದ ಸ್ಟುವರ್ಟ್ ಬ್ರಾಡ್ ಓವರ್ ನಲ್ಲಿ ಸತತ 6 ಸಿಕ್ಸರ್ ಬಾರಿಸಿದ್ದೆ ಎಂದು ತಿಳಿಸಿದ್ದರು. ಇದೀಗ, ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಯುವರಾಜ್ ಆಟವಾಡುತ್ತಿದ್ದಾರೆ. ಮತ್ತೆ ಒಂದೇ ಓವರ್ ನಲ್ಲಿ 6 ಸಿಕ್ಸರ್ ಬಾರಿಸುವುದಾಗಿ ಹೇಳಿಕೊಂಡಿದ್ದಾರೆ.
ಭಾನುವಾರ ನಡೆದ ಪಂದ್ಯದಲ್ಲಿ 24 ಬಾಲ್ ಗಳಲ್ಲಿ 42 ರನ್ ಬಾರಿಸಿದ ಯುವರಾಜ್ ಆಟ ಮುಗಿದ ನಂತರ, 17 ಮಂದಿ ಕ್ಯಾನ್ಸರ್ ಪೀಡಿತ ಮಕ್ಕಳನ್ನು ಮೈದಾನದಲ್ಲಿ ಭೇಟಿ ಮಾಡಿದ್ದು, ಈ ವೇಳೆ ಬಾಲಕನೊಬ್ಬ, ಮತ್ತೆ ಆರು ಸಿಕ್ಸರ್ ಬಾರಿಸುವಿರಾ ಎಂದು ಕೇಳಿದ್ದಾನೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಯುವಿ, ‘ದೇವರಲ್ಲಿ ಪ್ರಾರ್ಥಿಸು, ನಾನು ಮತ್ತೆ ಒಂದೇ ಓವರ್ ನಲ್ಲಿ 6 ಸಿಕ್ಸರ್ ಬಾರಿಸುತ್ತೇನೆ’ ಎಂದು ಹೇಳಿದ್ದಾರೆ.