ರಿಯೋ ಡಿ ಜನೈರೋ: ಬ್ರೆಜಿಲ್ ನ ರಿಯೋ ಡಿ ಜನೈರೋದಲ್ಲಿ ನಿರ್ಮಾಣವಾಗಿರುವ ಕ್ರೀಡಾ ಗ್ರಾಮದಲ್ಲಿ 31 ನೇ ಒಲಿಂಪಿಕ್ಸ್ ಗೆ ಭಾರತೀಯ ಕಾಲಮಾನ ಶನಿವಾರ ಬೆಳಗಿನ ಜಾವ 4.30ಕ್ಕೆ ಅದ್ಧೂರಿ ಚಾಲನೆ ದೊರೆತಿದೆ.
ಇಂದಿನಿಂದ ಆಗಸ್ಟ್ 21ರವರೆಗೆ ನಡೆಯಲಿರುವ ಒಲಿಂಪಿಕ್ಸ್ ಕ್ರೀಡೆಯಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿದ್ದು, ಸುಮಾರು 207 ದೇಶಗಳ 11,239 ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ಭಾರತದಿಂದ 119 ಕ್ರೀಡಾಪಟುಗಳು ಭಾಗವಹಿಸಿದ್ದು, ವಿವಿಧ ಕ್ರೀಡೆಗಳಲ್ಲಿ ಸ್ಪರ್ಧೆ ನೀಡಲು ಸಜ್ಜಾಗಿದ್ದಾರೆ. ಕ್ಯಾರಿ ಓಕ ಗಾನಸುಧೆ ಹಾಗೂ ಸಾಂಬಾ ನೃತ್ಯದೊಂದಿಗೆ ರಿಯೋ ಡಿ ಜನೈರೋದಲ್ಲಿನ ಮರಕಾನಾ ಸ್ಟೇಡಿಯಂನಲ್ಲಿ ಜಾಗತಿಕ ಕ್ರೀಡಾ ಹಬ್ಬಕ್ಕೆ ಅದ್ಧೂರಿ ಚಾಲನೆ ದೊರೆಯಿತು. ಅಲ್ಲಿ ಹೊಸ ಲೋಕವೇ ಸೃಷ್ಠಿಯಾದಂತಿತ್ತು.
ಭಾರತದ ಸ್ಪರ್ಧಿಗಳ ಪಥಸಂಚಲನದ ನೇತೃತ್ವವನ್ನು ಶೂಟರ್ ಅಭಿನವ್ ಬಿಂದ್ರಾ ವಹಿಸಿದ್ದರು. ರಾಷ್ಟ್ರಧ್ವಜ ಹಿಡಿದು ಹೆಜ್ಜೆಹಾಕಿದ್ದ ಬಿಂದ್ರಾ ಹಿಂದೆ ಭಾರತದ ಕ್ರೀಡಾಪಟುಗಳು ಭಾಗವಹಿಸಿ ಗಮನಸೆಳೆದರು. ಇಂದು ಭಾರತದ ಕ್ರೀಡಾಪಟುಗಳು 9 ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.