ಚಿಕ್ಕಬಳ್ಳಾಪುರ: ಅಪಾಯಕಾರಿ ಸ್ಥಳಗಳಲ್ಲಿ ಅಪಾಯ ಎದುರಾದರೆ ಪರಿಸ್ಥಿತಿ ಹೇಗಿರಬೇಡ. ಪೆಟ್ರೋಲ್ ಬಂಕ್ ನಲ್ಲಿ ಬೈಕ್ ಗೆ ಪೆಟ್ರೋಲ್ ಹಾಕಿಸಿಕೊಳ್ಳುವ ಸಂದರ್ಭದಲ್ಲಿಯೇ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರದ ಪ್ರಮುಖ ರಸ್ತೆಯಲ್ಲಿನ ಪೆಟ್ರೋಲ್ ಬಂಕ್ ಒಂದಕ್ಕೆ ಪೆಟ್ರೋಲ್ ಹಾಕಿಸಿಕೊಳ್ಳಲು ವ್ಯಕ್ತಿಯೊಬ್ಬ ಬಂದಿದ್ದಾನೆ. ಪೆಟ್ರೋಲ್ ಹಾಕಿಸಿಕೊಂಡು ಬೈಕ್ ಸ್ಟಾರ್ಟ್ ಮಾಡುವಾಗ ಇದ್ದಕ್ಕಿದ್ದಂತೆ ವಾಹನಕ್ಕೆ ಬೆಂಕಿ ತಗುಲಿದೆ. ಅಲ್ಲಿದ್ದವರೆಲ್ಲಾ ಪರಾರಿಯಾಗಿದ್ದಾರೆ. ಕೊನೆಗೆ ಕೆಲವರು ಹಗ್ಗದ ಮೂಲಕ ಬೈಕ್ ಅನ್ನು ಎಳೆದುಕೊಂಡು ದೂರಕ್ಕೆ ಹೋಗಿದ್ದು, ಬೈಕ್ ಭಸ್ಮವಾಗಿದೆ. ಅದೃಷ್ಟವಶಾತ್ ಸಂಭವಿಸಬಹುದಾಗಿದ್ದ ಭಾರೀ ದುರಂತವೊಂದು ತಪ್ಪಿದಂತಾಗಿದೆ.
ಗೌರಿಬಿದನೂರು ತಾಲ್ಲೂಕು ಮಂಚೇನಹಳ್ಳಿಯ ನಿವಾಸಿ ಬೈಕ್ ನಲ್ಲಿ ಬಂಕ್ ಗೆ ಆಗಮಿಸಿ, ಪೆಟ್ರೋಲ್ ಹಾಕಿಸಿಕೊಂಡ ನಂತರ, ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಕೆಲವರ ಸಮಯ ಪ್ರಜ್ಞೆಯಿಂದ ಅಪಾಯ ತಪ್ಪಿದೆ. ಘಟನೆಯ ದೃಶ್ಯಾವಳಿಗಳು ಸಿ.ಸಿ. ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿವೆ.