ಕಳೆದ ಜುಲೈ 22 ರಂದು ದೇಶ- ವಿದೇಶಗಳಲ್ಲಿ ಏಕಕಾಲಕ್ಕೆ ತೆರೆ ಕಂಡಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಬಾಲಿ’ ಚಿತ್ರ ಬಾಕ್ಸಾಫೀಸ್ ಕಲೆಕ್ಷನ್ ನಲ್ಲಿ ಕಮಾಲ್ ಮಾಡಿದೆ. ಬಿಡುಗಡೆಗೂ ಮುನ್ನವೇ ಹಲವು ದಾಖಲೆ ಮಾಡಿದ್ದ ಈ ಚಿತ್ರ, ಬಾಕ್ಸಾಫೀಸ್ ಗಳಿಕೆಯಲ್ಲಿ ಈಗ ಹೊಸ ದಾಖಲೆಯನ್ನೇ ಬರೆದಿದೆ.
ಚಿತ್ರ ಇದುವರೆಗೂ 650 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಗಳಿಸಿದೆ ಎನ್ನಲಾಗಿದ್ದು, ಗಳಿಕೆಯಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್, ಅನುಷ್ಕಾ ಶರ್ಮಾ ಅಭಿನಯದ ‘ಸುಲ್ತಾನ್’ ಚಿತ್ರವನ್ನು ಹಿಂದಿಕ್ಕಿದೆ. ಉತ್ತರ ಭಾರತದಲ್ಲಿ ಹಿಂದಿಯೇತರ ಚಿತ್ರಗಳಿಗೆ ನೆಲೆಯಿಲ್ಲವೆಂಬ ಮಾತನ್ನು ಸುಳ್ಳಾಗಿಸಿರುವ ಕಬಾಲಿ ಉತ್ತರ ಭಾರತದಲ್ಲಿ ಬರೋಬ್ಬರಿ 40 ಕೋಟಿ ರೂ. ಗಳನ್ನು ಗಳಿಕೆ ಮಾಡಿದೆ.
75 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಈ ಚಿತ್ರ, ಬಿಡುಗಡೆಗೂ ಮುನ್ನವೇ ಮ್ಯೂಸಿಕ್ ಮತ್ತು ಸೆಟಲೈಟ್ ಹಕ್ಕುಗಳಿಂದಾಗಿ 200 ಕೋಟಿ ರೂ. ಗಳಿಸಿತ್ತು. ಭಾರತದಲ್ಲಿ ಈ ಚಿತ್ರದ ಗಳಿಕೆ 211 ಕೋಟಿ ರೂ. ಗಳಾಗಿದ್ದರೆ, ಅಮೆರಿಕಾ, ಮಲೇಶಿಯಾ, ಜಪಾನ್ ಸೇರಿದಂತೆ ವಿವಿಧ ದೇಶಗಳಲ್ಲಿ ಬಿಡುಗಡೆಗೊಂಡಿದ್ದ ‘ಕಬಾಲಿ’ ಈ ಮೂಲಕ 259 ಕೋಟಿ ರೂ. ಗಳಿಸಿದೆ ಎನ್ನಲಾಗಿದೆ.