ಅಪಾಯಿಂಟ್ ಮೆಂಟ್ ಪಡೆಯದೆ ಹಲ್ಲು ನೋವಿಗೆ ಚಿಕಿತ್ಸೆ ಪಡೆಯಲು ಬಂದಿದ್ದ ಯುವಕನೊಬ್ಬ, ತನಗೆ ಬೇಗ ಚಿಕಿತ್ಸೆ ನೀಡಲಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ತನ್ನ ಸ್ನೇಹಿತರ ಜೊತೆ ಸೇರಿ ವೈದ್ಯೆ, ವೈದ್ಯೆಯ ಪತಿ ಹಾಗೂ ನರ್ಸ್ ಮೇಲೆ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಹೆಚ್.ಎಸ್.ಆರ್. ಲೇಔಟ್ ನಲ್ಲಿ ಕ್ಲಿನಿಕ್ ನಡೆಸುತ್ತಿರುವ ಮೃದುಲಾ ಸಿಂಗ್ ಅವರ ಬಳಿಗೆ ಹಲ್ಲು ನೋವಿಗೆ ಚಿಕಿತ್ಸೆ ಪಡೆಯಲು ನಿಶಾಂತ್ ರೆಡ್ಡಿ ಎಂಬಾತ ಕಳೆದ ವಾರ, ತನ್ನ ಸ್ನೇಹಿತರಾದ ಶರತ್ ರೆಡ್ಡಿ ಹಾಗೂ ಮದನ್ ನಾಯ್ಡು ಜೊತೆ ಬಂದಿದ್ದಾನೆ.
ಈ ವೇಳೆ ಬೇರೆ ರೋಗಿಯನ್ನು ನೋಡುತ್ತಿದ್ದ ಕಾರಣ ಅಪಾಯಿಂಟ್ ಮೆಂಟ್ ಪಡೆದು ಕಾಯುವಂತೆ ಸೂಚಿಸಲಾಗಿದೆ. ಅಷ್ಟಕ್ಕೆ ಸಿಟ್ಟಿಗೆದ್ದ ಮೂವರು, ಕ್ಲಿನಿಕ್ ನಲ್ಲಿ ದಾಂಧಲೆ ನಡೆಸಿದ್ದಾರೆ. ಈ ವೇಳೆ ವೈದ್ಯೆ ತಮ್ಮ ಪತಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಧಾವಿಸಿ ಬಂದ ಅವರು ಪೊಲೀಸರಿಗೆ ಫೋನ್ ಮಾಡಲು ಮುಂದಾದಾಗ ವೈದ್ಯೆ, ವೈದ್ಯೆಯ ಪತಿ ಹಾಗೂ ನರ್ಸ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ಕುರಿತು ಹೆಚ್.ಎಸ್.ಆರ್. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಇದೀಗ ಮೂವರು ಆರೋಪಿಗಳನ್ನೂ ಬಂಧಿಸಿದ್ದಾರೆ.