ನೈನಿತಾಲ್ ನ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಲು ಬಂದಿದ್ದ ದಂಪತಿಗಳು ಹೋಟೆಲ್ ಕೋಣೆಯಲ್ಲಿದ್ದ ವೇಳೆ ಹಠಾತ್ತಾಗಿ ಚಿರತೆಯೊಂದು ಒಳ ಪ್ರವೇಶಿಸಿ ಬೆಚ್ಚಿ ಬೀಳಿಸಿರುವ ಘಟನೆ ನಡೆದಿದೆ.
ಮೀರತ್ ಮೂಲದ ಸುಮಿತ್ ರಾಥೋರ್ ಮತ್ತವರ ಪತ್ನಿ ಶಿವಾನಿ ಪ್ರವಾಸಕ್ಕೆಂದು ನೈನಿತಾಲ್ ಗೆ ಬಂದ ವೇಳೆ ಅಲ್ಲಿನ ತಲಿತಾಲ್ ಪ್ರಾಂತ್ಯದ ಹೋಟೆಲ್ ನಲ್ಲಿ ತಂಗಿದ್ದರು. ದಂಪತಿಗಳು ರೂಮಿನಲ್ಲಿದ್ದ ಸಂದರ್ಭದಲ್ಲಿ ಬೆಳಗಿನ ಜಾವ ಚಿರತೆಯೊಂದು ತೆರೆದಿದ್ದ ಕಿಟಕಿ ಮೂಲಕ ಒಳ ಪ್ರವೇಶಿಸಿದೆ.
ಇದನ್ನು ಕಾಣುತ್ತಲೆ ಗಾಬರಿಗೊಳಗಾದ ದಂಪತಿಗಳು ಮಂಚದ ಕೆಳಗೆ ಅಡಗಿಕೊಂಡು ಕುಳಿತಿದ್ದು, ಚಿರತೆ ಬಾತ್ ರೂಮ್ ಒಳಗೆ ಹೋಗಿದೆ. ಇದೇ ಸಂದರ್ಭ ಸಾಧಿಸಿದ ಸುಮಿತ್, ಧೈರ್ಯ ವಹಿಸಿ ಬಾತ್ ರೂಂ ಚಿಲಕ ಹಾಕಿ ಪತ್ನಿಯೊಂದಿಗೆ ಕೋಣೆಯಿಂದ ಹೊರಗೆ ಓಡಿ ಬಂದಿದ್ದಾರೆ.
ವಿಷಯ ತಿಳಿದ ಹೋಟೆಲ್ ನವರು ಅರಣ್ಯ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದ್ದು, ಅವರು ಚಿರತೆ ಸೆರೆ ಹಿಡಿಯಲು ಅರವಳಿಕೆ ಮದ್ದು, ಬೋನಿನೊಂದಿಗೆ ಬಂದಿದ್ದರೂ ಚಿರತೆ ಪರಾರಿಯಾಗುವಲ್ಲಿ ಯಶಸ್ವಿಯಾಗಿದೆ.