ಭಾರತದಲ್ಲಿ ಬಾಲ್ಯವಿವಾಹದಂತ ಅನಿಷ್ಠ ಪದ್ಧತಿ ಇನ್ನೂ ಜಾರಿಯಲ್ಲಿದೆ. ವಿವಾಹದ ಸಮಯದಲ್ಲಿ ಮಕ್ಕಳಿಗೆ ಏನೂ ತಿಳಿಯುವುದಿಲ್ಲ. ಆದ್ರೆ ಬೆಳೆದು ದೊಡ್ಡವರಾದ ಮೇಲೆ ಭಾವನೆಗಳು ಬದಲಾಗುವುದರಿಂದ ಪಾಲಕರ ಬಾಲ್ಯವಿವಾಹದ ನಿರ್ಣಯ ಮಕ್ಕಳಿಗೆ ಮುಳ್ಳಾಗಿ ಪರಿಣಮಿಸುತ್ತದೆ. ರಾಜಸ್ಥಾನದಲ್ಲಿ ಹುಡುಗಿಯೊಬ್ಬಳು ಈಗ ಸಂಕಷ್ಟಕ್ಕೆ ಸಿಲುಕಿದ್ದಾಳೆ.
ಬಿಕನೇರಾದ ಪಂಚು ಗ್ರಾಮದಲ್ಲಿ ಬವರಿ ಎಂಬಾಕೆಯ ಮದುವೆ ಆಕೆ ನಾಲ್ಕು ವರ್ಷದವಳಿದ್ದಾಗಲೇ ನೆರವೇರಿತ್ತು. ಬವರಿ ಈಗ ದೊಡ್ಡವಳಾಗಿದ್ದಾಳೆ. ಬಿ.ಎ ಅಂತಿಮ ವರ್ಷದಲ್ಲಿ ಓದುತ್ತಿದ್ದಾಳೆ. ಆದ್ರೆ ಆಕೆಯ ಗಂಡ ಅನಕ್ಷರಸ್ಥ. ಕಳೆದ ಮೂರು ವರ್ಷಗಳಿಂದ ಬವರಿಯನ್ನು ಮನೆಗೆ ಕಳುಹಿಸುವಂತೆ ಗಂಡನ ಮನೆಯವರು ಪೀಡಿಸುತ್ತಿದ್ದಾರೆ. ಆದ್ರೆ ಅನಕ್ಷರಸ್ಥ ಗಂಡನ ಮನೆಗೆ ಹೋಗಲು ಬವರಿ ಒಪ್ಪುತ್ತಿಲ್ಲ.
ಬವರಿಯನ್ನು ಕಳುಹಿಸಿ ಇಲ್ಲ 15 ಲಕ್ಷ ರೂಪಾಯಿ ನೀಡಿ ಎಂದು ಗಂಡಿನ ಮನೆಯವರು ಒತ್ತಡ ಹೇರಿದ್ದಾರೆ. ಜೊತೆಗೆ ಬೆದರಿಕೆಯನ್ನು ಒಡ್ಡುತ್ತಿದ್ದಾರೆ. ಪಂಚಾಯತಿಯಲ್ಲಿ ಈ ವಿಷಯ ಪ್ರಸ್ತಾಪಿಸಿ, ಜಾತಿಯಿಂದ ಹೊರ ಹಾಕುವುದಾಗಿ ಹೆದರಿಸುತ್ತಿದ್ದಾರೆ. ಬವರಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರಿಂದ ಭಾನುವಾರ ನಡೆಯಬೇಕಾಗಿದ್ದ ಪಂಚಾಯತಿ ನಡೆದಿಲ್ಲ. ಜೊತೆಗೆ ಬವರಿ ಕುಟುಂಬಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.