ಸುರಂಗ ಎಂದಾಕ್ಷಣ ರೈಲ್ವೆ ಸುರಂಗವೋ ಅಥವಾ ನೆಲದಡಿಯ ಸುರಂಗವೋ ನೆನಪಾಗುತ್ತದೆ. ಯಾರ ಯೋಚನೆಗೂ ಸುಲಭಕ್ಕೆ ನಿಲುಕದ ಸುರಂಗ ಮಾರ್ಗದ ಕಲ್ಪನೆಯನ್ನು ನಾರ್ವೆ ಮಾಡಿದೆ. ಸಮುದ್ರದ ಒಳಗೆ ತೇಲುವ ಸುರಂಗ ನಿರ್ಮಿಸುವ ಅದ್ಭುತ ಯೋಜನೆಯನ್ನು ನಾರ್ವೆ ಮಾಡಿದೆ.
ಯೋಜನೆ ಹುಟ್ಟಿದ್ದು ಹೇಗೆ?
ನಾರ್ವೆಯ ಕ್ರಿಸ್ಟಿಯನ್ ಸಾಂಡ್ ಮತ್ತು ಟ್ರೊಂಡ್ ಧಿಮ್ ಮಧ್ಯೆ ಸಮುದ್ರ ಕಾಲುವೆ ಬರುತ್ತದೆ. ಇದರಲ್ಲಿ ಹಡಗುಗಳು ಓಡಾಡುತ್ತವೆಯಾದರೂ ಯಾವುದೇ ವಾಹನಗಳ ಸಂಪರ್ಕವಿಲ್ಲ. ಅದಕ್ಕಾಗಿ ಸುತ್ತುವರಿದು ಹೋಗದೆ ಬೇರೆ ದಾರಿಯೇ ಇಲ್ಲ. ಎರಡು ಪ್ರದೇಶಗಳ ಮಧ್ಯೆ ಸೇತುವೆ ನಿರ್ಮಾಣ ಮಾಡಿದರೆ ಪ್ರಕೃತಿ ಸೌಂದರ್ಯ ಹಾಳಾಗುತ್ತದೆ ಎಂದು ನಾರ್ವೆ ತೇಲುವ ಸುರಂಗದ ಯೋಜನೆ ಹಾಕಿದೆ.
ಹೇಗಿರಲಿದೆ ಸುರಂಗ?
ಸಿಮೆಂಟಿನಿಂದ ತಯಾರಾಗುವ ಈ ತೇಲುವ ಸುರಂಗ ಟ್ಯೂಬ್ ಮಾದರಿಯಲ್ಲಿದ್ದು, ಇದು ನೀರಿನ ಒಳಗೆ ತೇಲುವಂತೆ ಇರುತ್ತದೆ. ಸುರಂಗ ಹೀಗೆ ತೇಲಲು ಅದರ ಮೇಲೆ ದೋಣಿಯಾಕಾರದ ರಚನೆಗಳನ್ನು ಮಾಡಲಾಗುತ್ತದೆ. ಇವು ಸುರಂಗ ಮುಳುಗದಂತೆ ತಡೆಯುತ್ತವೆ.
ಸಮುದ್ರದ 60 ರಿಂದ 100 ಅಡಿ ಆಳದಲ್ಲಿ ಈ ಸುರಂಗ ತೇಲುತ್ತದೆ. ಇದರಿಂದ ಸಮುದ್ರದ ಮೇಲೆ ಹಡಗುಗಳ ಸಂಚಾರಕ್ಕೆ ಅಡ್ಡಿಯಾಗುವುದಿಲ್ಲ. ಇದರಲ್ಲಿ ದ್ವಿಪಥ ಸಂಚಾರ ಕೂಡ ಇರಲಿದೆ. ನಾರ್ವೆಯ ಈ ಯೋಜನೆಗೆ ಇನ್ನೂ ಅನುಮತಿ ದೊರಕಿಲ್ಲ. ಅನುಮತಿ ಸಿಕ್ಕಿದರೆ 7-10 ವರ್ಷದೊಳಗಾಗಿ ಸುರಂಗ ತೇಲುತ್ತಿರುತ್ತದೆ. ಒಮ್ಮೆ ಹೀಗಾದಲ್ಲಿ ಪ್ರಪಂಚದ ದೊಡ್ಡ ಅದ್ಬುತಕ್ಕೆ ನಾರ್ವೆ ಸಾಕ್ಷಿಯಾಗಲಿದೆ.