ಸಾಮಾನ್ಯವಾಗಿ ಎಲ್ಲರ ಮನೆಯ ಮುಂದೆ ಮನೆ ಒಡೆಯನ ನಾಮಫಲಕವಿರುತ್ತದೆ. ಅವರ ಹೆಸರಿನಿಂದಲೇ ಮನೆಯನ್ನು ಗುರುತಿಸಲಾಗುತ್ತದೆ. ಆದರೆ ಛತ್ತೀಸಗಢದ ಬಾಲೋದ್ ಜಿಲ್ಲೆಯಲ್ಲಿ ಮನೆ ಮಗಳ ಹೆಸರಿನಿಂದ ಪ್ರತಿಯೊಂದು ಮನೆಯನ್ನು ಗುರುತಿಸಲಾಗುತ್ತದೆ.
ಬಾಲೋದ್ ಜಿಲ್ಲೆಯ ಪ್ರತಿಯೊಂದು ಮನೆಯ ಮುಂದೆ ಒಬ್ಬ ಹೆಣ್ಣಿನ ಹೆಸರಿನ ನಾಮಫಲಕ ತೂಗುತ್ತಿರುತ್ತದೆ. ಅಲ್ಲಿ ಇದೊಂದು ದೊಡ್ಡ ಅಭಿಯಾನವೇ ಆಗಿಹೋಗಿದೆ. ‘ಮನೆಯ ಹೆಣ್ಣುಮಗಳೇ ಮನೆಗೆ ಗುರುತು’ ಎಂಬುದನ್ನು ಸಾರಿ ಸಾರಿ ಹೇಳುತ್ತಿದೆ ಈ ‘ಪ್ರೇರಣಾ ಅಭಿಯಾನ’.
ಬಾಲೋದ್ ಜಿಲ್ಲೆಯ ಜಿಲ್ಲಾಧಿಕಾರಿ ರಾಜೇಶ್ ರಾಣಾ, ಈ ಅಭಿಯಾನದ ಮುಖ್ಯ ರುವಾರಿಯಾಗಿದ್ದಾರೆ. ಹೆಣ್ಣು ಮಗು ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ಹೆಸರು ಪಡೆಯಬೇಕು ಎಂಬುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಗೆ ಜಿಲ್ಲೆಯ ಹಾಗೂ ಸುತ್ತಮುತ್ತ ಅನೇಕ ಹಳ್ಳಿಗಳ ಬೆಂಬಲ ದೊರೆತಿದೆ. ಈಗಾಗಲೇ 500ಕ್ಕೂ ಹೆಚ್ಚು ಮನೆಗಳಲ್ಲಿ ಹೆಣ್ಣುಮಗಳ ಹೆಸರಿನ ನಾಮಫಲಕ ಕಾಣಿಸುತ್ತಿದೆ.
ಹೆಣ್ಣು ಮಗು ಬೇಡವೆಂದು ಹಾದಿಬೀದಿಯಲ್ಲಿ ಮಕ್ಕಳನ್ನು ಬಿಟ್ಟು ಹೋಗುವ ಈ ಕಾಲದಲ್ಲಿ ‘ಪ್ರೇರಣಾ ಅಭಿಯಾನ’, ಬೇಟಿ ಪಡಾವೋ, ಬೇಟಿ ಬಚಾವೋ ಎಂದು ಕೂಗಿ ಹೇಳುತ್ತಿದೆ.