ಸಿನಿಮಾಗಳಲ್ಲಿ ಸಾಹಸದ ದೃಶ್ಯಗಳನ್ನು ಚಿತ್ರೀಕರಿಸುವಾಗ ಮೈಯೆಲ್ಲಾ ಕಣ್ಣಾಗಿರಬೇಕು. ಇಲ್ಲದಿದ್ದರೆ, ಅಪಾಯ ಗ್ಯಾರಂಟಿ. ಸಾಹಸ ಪ್ರದರ್ಶನದ ಸಂದರ್ಭದಲ್ಲಿ ಅನೇಕರು ಅಪಾಯಕ್ಕೆ ಸಿಲುಕಿದ್ದಾರೆ. ಅದೇ ರೀತಿ ಸಿನಿಮಾದಲ್ಲಿಯೂ ಅವಘಡ ನಡೆದಿವೆ.
ಸಾಮಾನ್ಯವಾಗಿ ಹಿಂದೆಲ್ಲಾ ನಾಯಕ ನಟರು ಸಾಹಸದ ಸನ್ನಿವೇಶಗಳಲ್ಲಿ ಡೂಪ್ ಬಳಸುತ್ತಿದ್ದರು. ಇತ್ತೀಚೆಗೆ ಬಹುತೇಕ ನಾಯಕ ನಟರೇ ಸಾಹಸ ದೃಶ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ. ಹೀಗೆ ಸಾಹಸದ ದೃಶ್ಯದ ಚಿತ್ರೀಕರಣ ಸಂದರ್ಭದಲ್ಲಿ ನಾಯಕ ನಟರೊಬ್ಬರು ಗಾಯಗೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ. ಸ್ಯಾಂಡಲ್ ವುಡ್ ನಟ ಅನಿರುದ್ಧ್ ಗಾಯಗೊಂಡವರು. ಅನಿರುದ್ಧ್ ಅಭಿನಯದ ‘ರಾಜಸಿಂಹ’ ಚಿತ್ರದ ಚಿತ್ರೀಕರಣ ಮೈಸೂರಿನ ದುದ್ದಗೆರೆಯಲ್ಲಿ ಕೆಲವು ದಿನಗಳಿಂದ ನಡೆಯುತ್ತಿದೆ.
ಸಾಹಸದ ದೃಶ್ಯಗಳನ್ನು ಖ್ಯಾತ ಸಾಹಸ ನಿರ್ದೇಶಕರಾದ ಡಿಫರೆಂಟ್ ಡ್ಯಾನಿ ಅವರ ನಿರ್ದೇಶನದಲ್ಲಿ, ಚಿತ್ರೀಕರಿಸಿಕೊಳ್ಳುವ ಸಂದರ್ಭದಲ್ಲಿ, ಅನಿರುದ್ಧ್ ಅವರ ಮುಖಕ್ಕೆ ಕೋಲು ಬಡಿದು, ತರಚಿದ ಗಾಯಗಳಾಗಿವೆ. ಇದರಿಂದ ಆತಂಕ ಎದುರಾದರೂ, ಚೇತರಿಸಿಕೊಂಡ ಅನಿರುದ್ಧ್ ಅವರು, ಚಿತ್ರೀಕರಣ ಮುಂದುವರೆಸಿದ್ದಾರೆ ಎಂದು ಹೇಳಲಾಗಿದೆ.