ರಷ್ಯಾದ ಸಾಹಸಿ ಫೆಡರ್ ಕಾನಿಯಾಕಾವ್ ಜುಲೈ 23 ರ ಶನಿವಾರದಂದು ಹಾಟ್ ಏರ್ ಬಲೂನ್ ನಲ್ಲಿ ಜಗತ್ತನ್ನು ಬಹುಬೇಗ ಸುತ್ತಿದ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾದರು.
ಕಾನಿಯಾಕಾವ್ ಅವರು, ಜುಲೈ 12 ರಂದು ತಮ್ಮ ಪ್ರಯಾಣ ಆರಂಭಿಸಿದ್ದರು. ಶನಿವಾರ ವಾಪಸ್ಸಾಗಿರುವ ಇವರು ಕೇವಲ 11 ದಿನದಲ್ಲಿ ಪ್ರಪಂಚ ಸುತ್ತಿ ಬಂದಿದ್ದಾರೆ. ಹಿಂದೆ 2002 ರಲ್ಲಿ ಸ್ಟೀವ್ ಫಾಸೆಟ್ ಎನ್ನುವವರು ಬಿಸಿ ಗಾಳಿ ಬಲೂನ್ ನಲ್ಲಿ 13 ದಿನದಲ್ಲಿ ಜಗವನ್ನು ಸುತ್ತಿ ಬಂದಿದ್ದರು. ಆಗ ಬಿಸಿ ಗಾಳಿಯ ಪುಗ್ಗಿಯಲ್ಲಿ ಒಬ್ಬರೇ ಕುಳಿತು ದೇಶ ಸುತ್ತಿದವರಲ್ಲಿ ಇವರು ಮೊದಲಿಗರಾಗಿದ್ದರು. ಈಗ ಅವರ ದಾಖಲೆಯನ್ನು ಕಾನಿಯಾಕಾವ್ ಮುರಿದಿದ್ದಾರೆ.
65 ವರ್ಷದ ಕಾನಿಯಾಕಾವ್ ಆಸ್ಟ್ರೇಲಿಯಾದಿಂದ ನ್ಯೂಜಿಲೆಂಡ್, ಪ್ರಶಾಂತ ಮಹಾಸಾಗರ, ದಕ್ಷಿಣ ಅಮೆರಿಕ, ಕೇಪ್ ಆಫ್ ಗುಡ್ ಹೋಪ್ ಮತ್ತು ದಕ್ಷಿಣ ಮಹಾಸಾಗರದ ಮೇಲೆ ಹಾದು ತಮ್ಮ ಪರ್ಯಟನೆಯನ್ನು ಪೂರ್ತಿಗೊಳಿಸಿದರು. ಸುಮಾರು 34,823 ಕಿಲೋಮೀಟರ್ ನ ಈ ಯಾತ್ರೆಯನ್ನು ಅವರು ಈ ಹಗುರ ಗಾಂಡೋಲಾದಲ್ಲಿ ಕುಳಿತೇ ಪೂರ್ತಿಗೊಳಿಸಿದರು. ಈ ಹಾಟ್ ಬಲೂನ್ ನಲ್ಲಿ 30ಕ್ಕೂ ಹೆಚ್ಚು ಪ್ರೊಫೇನ್ ಗ್ಯಾಸಿನ ಸಿಲಿಂಡರ್ ಗಳಿದ್ದವು.