ಕಳೆದ ತಿಂಗಳು ಅಫ್ಘಾನಿಸ್ತಾನದ ಕಾಬೂಲ್ ನಲ್ಲಿ ಶಂಕಿತ ಭಯೋತ್ಪಾದಕರಿಂದ ಅಪಹರಣಗೊಂಡಿದ್ದ ಭಾರತೀಯ ಮಹಿಳೆ 40 ವರ್ಷದ ಜುಡಿತ್ ಡಿಸೋಜಾರನ್ನು ಸುರಕ್ಷಿತವಾಗಿ ಪಾರು ಮಾಡಲಾಗಿದೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಈ ಕುರಿತು ಟ್ವೀಟ್ ಮಾಡಿದ್ದು, ಜುಡಿತ್ ಭಾರತಕ್ಕೆ ಮರಳಲಿದ್ದಾರೆಂದು ತಿಳಿಸಿದ್ದಾರೆ.
ಆಘಾ ಖಾನ್ ಫೌಂಡೇಶನ್ ಎಂಬ ಅಂತರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆಯಲ್ಲಿ ಸೀನಿಯರ್ ಟೆಕ್ನಿಕಲ್ ಅಡ್ವೈಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಕೋಲ್ಕತ್ತಾ ಮೂಲದ ಜುಡಿತ್ ಡಿಸೋಜಾರನ್ನು ಜೂನ್ 9 ರಂದು ಅವರ ಕಛೇರಿಯಿಂದಲೇ ಶಂಕಿತ ಭಯೋತ್ಪಾದಕರು ಅಪಹರಿಸಿದ್ದರು.
ಜುಡಿತ್ ಡಿಸೋಜಾರ ಕುಟುಂಬ, ಅವರ ಸುರಕ್ಷಿತ ಬಿಡುಗಡೆಗಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮೊರೆ ಹೋಗಿದ್ದು, ನರೇಂದ್ರ ಮೋದಿಯವರು ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿಯವರ ಗಮನಕ್ಕೆ ಈ ವಿಷಯ ತಂದಿದ್ದರು. ಇದೀಗ ಜುಡಿತ್ ಡಿಸೋಜಾ ಸುರಕ್ಷಿತವಾಗಿ ಬಿಡುಗಡೆಗೊಂಡಿದ್ದು, ದೆಹಲಿಗೆ ಆಗಮಿಸಿ ಸುಷ್ಮಾ ಸ್ವರಾಜ್ ರನ್ನು ಭೇಟಿ ಮಾಡಿದ ಬಳಿಕ ಕೋಲ್ಕತ್ತಾಕ್ಕೆ ತೆರಳಲಿದ್ದಾರೆಂದು ಹೇಳಲಾಗಿದೆ.