ಗಗನ ನೌಕೆಗಳಲ್ಲಿ ಒಂದಲ್ಲ ಒಂದು ಹೊಸ ಸಂಶೋಧನೆಗಳು ನಡೆಯುತ್ತಲೇ ಇರುತ್ತವೆ. ಈ ಪೈಕಿ ಈಗ ಹೊಸ ಸೇರ್ಪಡೆಯೆಂದರೆ ಪರ್ಲಾನ್ 2. ಈ ವಿಮಾನ ಇಂಜಿನ್ ಇಲ್ಲದೆಯೇ ಹಾರುತ್ತದೆ.
ಸ್ಪೇಸ್ ಗ್ಲೈಡರ್ ಪರ್ಲಾನ್ 2 ಎಂಬ ಈ ವಿಮಾನ ವಾಯುವಿನ ಅಲೆಯನ್ನೇ ವಿದ್ಯುತ್ ಅನ್ನಾಗಿ ಪರಿವರ್ತಿಸಿ ಹಾರಾಟ ನಡೆಸುತ್ತದೆ. ಸಾಮಾನ್ಯವಾಗಿ ವಿಮಾನಗಳು 35,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತವೆ. ಇನ್ನು ದಾಖಲೆಯ ಬಗ್ಗೆ ಹೇಳಬೇಕಾದರೆ 1976ರಲ್ಲಿ ಬ್ಲ್ಯಾಕ್ ಬರ್ಡ್ ವಿಮಾನ 85,069 ಅಡಿ ಎತ್ತರದಲ್ಲಿ ಹಾರಿತ್ತು. ಆದರೆ ಪರ್ಲಾನ್ 90,000 ಅಡಿ ಎತ್ತರದಲ್ಲಿ ಹಾರುತ್ತದೆ.
ಈ ವಿಮಾನ ಅಮೆರಿಕದ ನೆವಡಾದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಪ್ರಾಯೋಗಿಕ ಸಂಚಾರ ನಡೆಸಿತು. ಇದು ಓಝೋನ್ ರಂಧ್ರ ಹಾಗೂ ಜಾಗತಿಕ ತಾಪಮಾನ ವೈಪರೀತ್ಯ ಮುಂತಾದವುಗಳ ಅಧ್ಯಯನಕ್ಕೆ ಸಹಾಯವಾಗಲಿದೆ. ಇಂಜಿನ್ ಇಲ್ಲದ ಕಾರಣ ಇದು ಪರಿಸರಸ್ನೇಹಿ ವಿಮಾನವಾಗಿದ್ದು ಬಾಹ್ಯಾಕಾಶದಲ್ಲಿ ಹೊಗೆ, ಶಬ್ದ ಯಾವುದನ್ನೂ ಮಾಡುವುದಿಲ್ಲ. ಅತೀ ಕಡಿಮೆ ವಾಯುಸಾಂದ್ರತೆಯಲ್ಲೂ ಹಾರಾಟ ಮಾಡುವ ಸಾಮರ್ಥ್ಯವನ್ನು ಪರ್ಲಾನ್ 2 ಹೊಂದಿದೆ.
ಪರ್ಲಾನ್ ನಲ್ಲಿ ಇಬ್ಬರು ಪೈಲೆಟ್ ಕೂರಬಹುದಾಗಿದೆ. ಇದರ ರೆಕ್ಕೆ 84 ಅಡಿ ಉದ್ದವಿದ್ದು, ರೆಕ್ಕೆಯ ವ್ಯಾಪ್ತಿ 263 ಚದರ ಅಡಿಗಳು. ಈ ವಿಮಾನದ ಒಟ್ಟು ತೂಕ 816 ಕಿಲೋ. ಪರ್ಲಾನ್ 2 ವಿಮಾನದ ಯೋಜನೆಗಾಗಿ ಯುರೋಪಿಯನ್ ಏರೋಸ್ಪೇಸ್ ಕಂಪನಿ ಏರ್ ಬಸ್ 4 ದಶಲಕ್ಷ ಡಾಲರ್ ಹೂಡಿಕೆ ಮಾಡಿದೆ.