ಒಂದು ಮಗು, ಮೂರು ಮೂರು ಅಪ್ಪಂದಿರು. ಇದನ್ನು ಕೇಳಿದ್ರೆ ವಿಚಿತ್ರವೆನಿಸಬಹುದು. ಆದ್ರೆ ಮಧ್ಯಪ್ರದೇಶದ ಗ್ರಾಮವೊಂದರಲ್ಲಿ ಅಮಾಯಕ ಬಾಲಕನ ಜೀವನದಲ್ಲಿ ಇದು ನಡೆದಿದೆ. ಜನ್ಮ ಪ್ರಮಾಣಪತ್ರದಲ್ಲಿ ಮೂವರು ತಂದೆಯರ ಹೆಸರಿರುವುದು ಆತನ ಭವಿಷ್ಯಕ್ಕೆ ಅಡ್ಡಿಯಾಗಿದೆ.
ನಿಗಬಾನಿ ಗ್ರಾಮದ ಬಾಲಕ ಐದನೇ ತರಗತಿಯವರೆಗೆ ಓದಿದ್ದಾನೆ. ಮುಂದೆ ಓದುವ ಮನಸ್ಸಿದೆ. ಆದ್ರೆ ಜನ್ಮ ಪ್ರಮಾಣ ಪತ್ರದಲ್ಲಿ ತಂದೆಯ ಹೆಸರಿನ ಜಾಗದಲ್ಲಿ ಮೂವರ ಹೆಸರಿರುವುದರಿಂದ ಶಾಲೆಯಲ್ಲಿ ಪ್ರವೇಶ ಸಿಗ್ತಾ ಇಲ್ಲ. ಯಾರದ್ದೋ ತಪ್ಪಿಗೆ ಈ ಬಾಲಕ ಶಿಕ್ಷೆ ಅನುಭವಿಸುವಂತಾಗಿದೆ.
ವಾಸ್ತವವಾಗಿ ಬಾಲಕನ ತಾಯಿ ಮೂವರು ಕಾಮುಕರಿಂದ ಅತ್ಯಾಚಾರಕ್ಕೊಳಗಾಗಿದ್ದಳು. ಆಕೆಗೆ ನ್ಯಾಯವೇನೂ ಸಿಗಲಿಲ್ಲ. ಹುಟ್ಟಿದ ಮಗುವಿನ ಜನ್ಮ ದಾಖಲೆಯಲ್ಲಿ ಮಾತ್ರ ಗ್ರಾಮ ಪಂಚಾಯತಿ, ಮೂವರು ಆರೋಪಿಗಳ ಹೆಸರನ್ನೂ ನಮೂದಿಸಿದೆ. ಇದರಿಂದಾಗಿ ಬಾಲಕನ ಶಿಕ್ಷಣಕ್ಕೆ ಅಡ್ಡಿಯುಂಟಾಗಿದೆ.
ಘಟನೆ ಬಗ್ಗೆ ತಿಳಿದ ಹಿರಿಯ ಅಧಿಕಾರಿಗಳು ಶಾಲೆಗೆ ಪ್ರವೇಶ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಬಾಲಕ ಹೇಗೋ ಓದು ಮುಂದುವರೆಸುತ್ತಾನೆ. ಆದ್ರೆ ಸ್ನೇಹಿತರು, ನೆರೆ ಹೊರೆಯವರು ಮಾತಿನಲ್ಲಿಯೇ ಬಾಲಕನನ್ನು ಚುಚ್ಚುತ್ತಿದ್ದಾರೆ. ಮೂವರು ತಂದೆಯ ಮಗ ಎಂಬ ಕಪ್ಪು ಚುಕ್ಕಿ ಆತನ ಉಜ್ವಲ ಭವಿಷ್ಯಕ್ಕೆ ಅಡ್ಡಿಯಾಗ್ತಿದೆ.