ಬೆಂಗಳೂರು: ರಾಜ್ಯದಲ್ಲಿ ಕುಡಿಯುವ ನೀರಿನ ಪರೀಕ್ಷೆ ನಡೆಸುವ ಲ್ಯಾಬ್ ಆರಂಭಿಸಲು ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.
190 ಕೋಟಿ ರೂಪಾಯಿ ವೆಚ್ಛದಲ್ಲಿ 80 ತಾಲ್ಲೂಕುಗಳಲ್ಲಿ 146 ಕುಡಿಯುವ ನೀರಿನ ಪರೀಕ್ಷೆಯ ಲ್ಯಾಬ್ ಸ್ಥಾಪನೆಯಾಗಿದ್ದು, ಇದರಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹೆಚ್.ಕೆ.ಪಾಟೀಲ್ ಅವರು ಸ್ವಜನಪಕ್ಷಪಾತ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ನಕಲಿ ದಾಖಲೆ, ಬಿಲ್ ಸೃಷ್ಠಿಸಿ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಭಾರೀ ಅವ್ಯವಹಾರ ನಡೆಸಲಾಗಿದ್ದರೂ, ಸಚಿವರು ಮೌನ ವಹಿಸಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ದೂರಿದ್ದಾರೆ.
ರಾಜ್ಯದಲ್ಲಿ 7000 ಶುದ್ಧ ಕುಡಿಯುವ ನೀರಿನ ಘಟಕಗಳನ್ನು 3 ವರ್ಷದಲ್ಲಿ ಆರಂಭಿಸಲಾಗುವುದು. ಇಲ್ಲದಿದ್ದರೆ, ರಾಜೀನಾಮೆ ಕೊಡುತ್ತೇನೆ ಎಂದು ಸಚಿವ ಹೆಚ್.ಕೆ.ಪಾಟೀಲರು ಹೇಳಿದ್ದರು. ಇದುವರೆಗೆ ಸುಮಾರು 1500 ಘಟಕ ಮಾತ್ರ ಆರಂಭವಾಗಿವೆ. ಪಾಟೀಲರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಶೆಟ್ಟರ್ ಒತ್ತಾಯಿಸಿದ್ದಾರೆ.