ಸಾಮಾನ್ಯವಾಗಿ ಎಲ್ಲರ ಕೈಯಲ್ಲೂ ಮೊಬೈಲ್ ಇರುತ್ತದೆ. ಸಣ್ಣ ವಿಷಯಗಳಿಗೂ ಮೊಬೈಲ್ ನಲ್ಲೇ ಸಂದೇಶ ಕಳಿಸುವ ಪರಿಪಾಠ ಬೆಳೆದಿದೆ. ಆದರೆ ಇಲ್ಲಿ ಕೇಳಿ, ನಿಮ್ಮ ಪ್ರೀತಿ ಪಾತ್ರರಿಗೆ, ಅದರಲ್ಲೂ ಯುವಕ, ಯುವತಿಯರು ರೊಮ್ಯಾಂಟಿಕ್ ಸಂದೇಶ ಕಳುಹಿಸಲು ಇ-ಮೇಲ್ ಬಳಸುವುದು ಸೂಕ್ತ ಎಂದು ಅಧ್ಯಯನವೊಂದು ಹೇಳಿದೆ.
ವಾಯ್ಸ್ ನೋಟ್ ಗಳು ಜೋಡಿ ಹಕ್ಕಿಗಳ ಮಧ್ಯೆ ಪ್ರೀತಿ, ಪ್ರೇಮ ಹೆಚ್ಚಿಸುತ್ತವೆ ಎಂದು ಇತ್ತೀಚಿನ ಸಂಶೋಧನೆಯೊಂದು ಹೇಳಿತ್ತು. ಆದರೆ ಅಮೆರಿಕಾದ ಇಂಡಿಯಾನ ವಿಶ್ವವಿದ್ಯಾಲಯ ನಡೆಸಿದ ಹೊಸ ಸಂಶೋಧನೆಯಲ್ಲಿ ಈ ಮಾಹಿತಿ ಸುಳ್ಳಾಗಿದೆ ಎಂದು ವರದಿಯಾಗಿದೆ. ಈ ಕುರಿತಂತೆ ಮಾಹಿತಿ ಸಂಗ್ರಹಿಸಲು ಅಧ್ಯಯನಕ್ಕಾಗಿ ಸುಮಾರು 72 ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರನ್ನು ಬಳಸಿಕೊಳ್ಳಲಾಗಿತ್ತು. ಅಧ್ಯಯನದ ಸಂದರ್ಭದಲ್ಲಿ ಅವರು ಪ್ರೀತಿ ಪಾತ್ರರಿಗೆ ಮೆಸೇಜ್ ಕಳಿಸಿದ ರೀತಿ ಹಾಗೂ ಬಳಸುವ ಮಾಧ್ಯಮದ ಬಗ್ಗೆ ಕೇಳಲಾಗಿದ್ದು, ಅವರಲ್ಲಿ ಬಹುತೇಕರು ರೊಮ್ಯಾಂಟಿಕ್ ಸಂದೇಶಗಳನ್ನು ಕಳಿಸಲು ಇ-ಮೇಲ್ ಸರಿಯಾದ ಮಾರ್ಗ ಎಂದು ತಿಳಿಸಿದ್ದಾರೆನ್ನಲಾಗಿದೆ.
ಇಂಡಿಯಾನ ವಿಶ್ವವಿದ್ಯಾಲಯದ ಕೆಲ್ಲಿ ಸ್ಕೂಲ್ ಆಫ್ ಬ್ಯುಸಿನೆಸ್ ಸಂಸ್ಥೆಯ ಮುಖ್ಯಸ್ಥ ಅಲಾನ್ ಆರ್. ಡೆನ್ನಿಸ್ ಅವರು ಈ ಕುರಿತಂತೆ ಮಾಹಿತಿ ನೀಡಿದ್ದು, ಮೊಬೈಲ್ ಮೆಸೇಜ್ ಗಿಂತ ಇ-ಮೇಲ್ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಕಳಿಸಿದ ಸಂದೇಶ ಓದುಗರ ಮೇಲೆ ಪರಿಣಾಮ ಬೀರಬೇಕೆಂದರೆ ಬೇರೆಯವುಗಳಿಗಿಂತ ಇ-ಮೇಲ್ ಒಳ್ಳೆಯದು ಎಂದು ಹೇಳಿದ್ದಾರೆ.