ತನ್ನ ಪತಿಯಿಂದ ವಿಚ್ಚೇದನ ಪಡೆಯಲು ಬಯಸಿದಾಕೆಯೊಬ್ಬಳು ವಿಮಾನದಲ್ಲಿ ಮಾಡಿದ ಅವಾಂತರಕ್ಕೆ ಸುಮಾರು 500 ಮಂದಿ ಪ್ರಯಾಣಿಕರು ಪರಿತಪಿಸಿದ ಘಟನೆ ರಷ್ಯಾದಲ್ಲಿ ನಡೆದಿದೆ. ಈಕೆಯ ಕಾರಣಕ್ಕಾಗಿ ವಿಮಾನ 7 ಗಂಟೆ ತಡವಾಗಿ ಹಾರಾಟ ಆರಂಭಿಸಿದೆ.
ಮಾಸ್ಕೋದಿಂದ ವ್ಲಾಡಿಸ್ಟಾಕ್ ಗೆ ಹೊರಟಿದ್ದ ವಿಮಾನ ಏರಿದ್ದ ಈ ಮಹಿಳೆಗೆ ಇನ್ನೇನೂ ವಿಮಾನ ಟೇಕಾಫ್ ಆಗುವ ಸಮಯದಲ್ಲಿ ಪತಿ ಮೇಲೆ ಆಕ್ರೋಶ ಉಂಟಾಗಿದೆ. ಕೂಡಲೇ ಸಿಬ್ಬಂದಿ ಬಳಿ ತೆರಳಿದ ಆಕೆ, ತಾನು ಪತಿಯಿಂದ ವಿಚ್ಚೇದನ ಪಡೆಯಬೇಕಿದ್ದು, ಪ್ರಯಾಣ ಮುಂದುವರೆಸಲು ಬಯಸುವುದಿಲ್ಲವೆಂದಿದ್ದಾಳೆ.
ಇದರಿಂದಾಗಿ ವಿಮಾನ ಸಿಬ್ಬಂದಿಗೆ ಪೀಕಲಾಟ ಶುರುವಾಗಿದ್ದು, ಮಾನಸಿಕ ಒತ್ತಡದಲ್ಲಿರುವ ಮಹಿಳೆಯನ್ನು ಆಕೆ ಬಯಸಿದಂತೆ ವಿಮಾನದಿಂದ ಕೆಳಗಿಳಿಸಲು ಮುಂದಾಗಿದ್ದಾರೆ. ಆದರೆ ನಿಯಮಗಳ ಪ್ರಕಾರ ಕಡೆ ಕ್ಷಣದಲ್ಲಿ ಯಾರಾದರೂ ಪ್ರಯಾಣಿಕರು ಇಳಿದ ಸಂದರ್ಭದಲ್ಲಿ ಮತ್ತೊಮ್ಮೆ ಪ್ರಯಾಣಿಕರು ಹಾಗೂ ಅವರ ಲಗೇಜ್ ಗಳನ್ನು ಪರಿಶೀಲನೆ ಮಾಡಬೇಕಾಗಿದ್ದ ಕಾರಣ ಮಹಿಳೆಯ ಜೊತೆಗೆ ವಿಮಾನದಲ್ಲಿದ್ದ ಅಷ್ಟೂ ಪ್ರಯಾಣಿಕರನ್ನು ಇಳಿಸಲಾಗಿದೆಯಲ್ಲದೇ ಅದಾಗಲೇ ಇಡಲಾಗಿದ್ದ ಲಗೇಜ್ ಗಳನ್ನು ಮತ್ತೊಮ್ಮೆ ತಪಾಸಣೆ ನಡೆಸಲು ನಿರ್ಧರಿಸಲಾಗಿದೆ. ಈ ಎಲ್ಲ ಪ್ರಕ್ರಿಯೆ ಕಾರಣಕ್ಕಾಗಿ ವಿಮಾನ ಸುಮಾರು 7 ಗಂಟೆಗಳಷ್ಟು ತಡವಾಗಿ ಹಾರಾಟ ಆರಂಭಿಸಿದೆ ಎನ್ನಲಾಗಿದೆ.