ಮಡಿಕೇರಿ: ಅಪಹರಣ ಮತ್ತು ಹಣಕ್ಕಾಗಿ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ವಿಭಾಗದ ಡಿ.ವೈ.ಎಸ್.ಪಿ. ಕಲ್ಲಪ್ಪ ಹಂಡಿಭಾಗ್ ಅವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಹಸಿರಾಗಿರುವಾಗಲೇ ರಾಜ್ಯದಲ್ಲಿ ಮತ್ತೊಬ್ಬ ಡಿ.ವೈ.ಎಸ್.ಪಿ. ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಂಗಳೂರು ಐ.ಜಿ.ಕಚೇರಿಯಲ್ಲಿ ಡಿ.ವೈ.ಎಸ್.ಪಿ. ಆಗಿದ್ದ ಗಣಪತಿ ಆತ್ಮಹತ್ಯೆ ಮಾಡಿಕೊಂಡವರು. ಗಣಪತಿ, ಮಡಿಕೇರಿಯ ವಿನಾಯಕ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಬೆಳಿಗ್ಗೆ ಮಡಿಕೇರಿಗೆ ಆಗಮಿಸಿ ವಿನಾಯಕ ಲಾಡ್ಜ್ ನಲ್ಲಿ ರೂಂ ಮಾಡಿದ್ದ ಅವರು, ಮಧ್ಯಾಹ್ನ 1 ಗಂಟೆಗೆ ಸಮವಸ್ತ್ರದಲ್ಲಿಯೇ ರೂಂ ನಿಂದ ಹೊರಗೆ ಹೋಗಿ ವಾಪಸ್ ಬಂದಿದ್ದಾರೆ. ಒಬ್ಬರೇ ರೂಂ ಗೆ ಬಂದಿದ್ದು, ನಂತರ ಬಾಗಿಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಗಣಪತಿ ಅವರು ಸೂಸೈಡ್ ನೋಟ್ ಬರೆದಿಟ್ಟಿದ್ದು, ಇಲಾಖೆಯ ಮೇಲಾಧಿಕಾರಿಗಳು ಹಾಗೂ ರಾಜಕಾರಣಿಗಳ ಒತ್ತಡ ಮತ್ತು ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂದು ಹೇಳಿದ್ದಾರೆ ಎನ್ನಲಾಗಿದೆ. ಗಣಪತಿ ಬೆಂಗಳೂರಿನಲ್ಲಿ ನಡೆದ ರೌಡಿಶೀಟರ್ ಒಬ್ಬನ ಎನ್ ಕೌಂಟರ್ ಬಳಿಕ ಇಲಾಖೆಯಲ್ಲಿ ಉತ್ತಮ ಹೆಸರು ಗಳಿಸಿದ್ದರು. ಅವರಿಗೆ 51 ವರ್ಷ ವಯಸ್ಸಾಗಿದ್ದು, ಇನ್ನೂ 9 ವರ್ಷ ಸೇವಾವಧಿ ಇತ್ತೆನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.