ವಾರಂಗಲ್: ಮಕ್ಕಳಿಗೆ ಕಿಂಚಿತ್ ನೋವಾದರೂ, ಪೋಷಕರು ಸಂಕಟ ಅನುಭವಿಸುತ್ತಾರೆ. ಅಲ್ಲದೇ, ಮಕ್ಕಳ ಬಗ್ಗೆ ಇನ್ನಿಲ್ಲದ ಕಾಳಜಿ ವಹಿಸುತ್ತಾರೆ. ಆದರೆ, ಬೆಳೆದು ದೊಡ್ಡವರಾದ ಕೆಲವು ಮಕ್ಕಳು, ಪೋಷಕರನ್ನು ವೃದ್ಧಾಶ್ರಮಗಳಿಗೆ ಕಳುಹಿಸಿ ಬಿಡುತ್ತಾರೆ.
ಹೀಗೆ ವೃದ್ಧಾಶ್ರಮದಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರವನ್ನು ಕೂಡ ನೆರವೇರಿಸಲು ಅವರ ಪುತ್ರ ನಿರಾಕರಿಸಿದ್ದರಿಂದ ಮುಸ್ಲಿಂ ಮಹಿಳೆಯೊಬ್ಬರು ತಾವೇ ಮುಂದೆ ನಿಂತು ಹಿಂದೂ ಧಾರ್ಮಿಕ ವಿಧಿ ವಿಧಾನದಂತೆ ಅಂತ್ಯ ಸಂಸ್ಕಾರ ನೆರವೇರಿಸಿದ ಘಟನೆ ವಾರಂಗಲ್ ನಲ್ಲಿ ನಡೆದಿದೆ. ವಾರಂಗಲ್ ಸಮೀಪದ ಹನುಮಕೊಂಡದ ಸಹೃದಯ ವೃದ್ಧಾಶ್ರಮದಲ್ಲಿ ನೆಲೆಸಿದ್ದ 75 ವರ್ಷದ ಕೀರ್ತಿ ಶ್ರೀನಿವಾಸ್ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಅವರ ಪುತ್ರ ಶರತ್ ಗೆ ವಿಷಯ ತಿಳಿಸಲಾಗಿದೆ.
ತಾನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದು, ಅಂತ್ಯಸಂಸ್ಕಾರ ಮಾಡಲ್ಲ ಎಂದು ಆತ ಹೇಳಿದ್ದಾನೆ. ಬಂಧುಗಳು ಕೂಡ ಅಂತ್ಯ ಸಂಸ್ಕಾರ ಮಾಡಲು ಮುಂದೆ ಬರಲಿಲ್ಲ. ಕೀರ್ತಿ ಶ್ರೀನಿವಾಸ್ ಅವರನ್ನು ವೃದ್ಧಾಶ್ರಮದಲ್ಲಿ ನೋಡಿಕೊಳ್ಳುತ್ತಿದ್ದ ಮುಸ್ಲಿಂ ಮಹಿಳೆ ಯಾಕೂಬಿಯೇ ಮುಂದೆ ನಿಂತು ಹಿಂದೂ ಧಾರ್ಮಿಕ ವಿಧಾನದಂತೆ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.