ಬಹು ಮಹಡಿ ಕಟ್ಟಡದ ಮೇಲಿನಿಂದ ಪುಟ್ಟ ನಾಯಿಯೊಂದನ್ನು ಕೆಳಗೆಸೆದು ಕ್ರೂರತೆ ಮೆರೆದಿದ್ದ ಇಬ್ಬರು ಮೆಡಿಕಲ್ ವಿದ್ಯಾರ್ಥಿಗಳನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ನಾಯಿ ಎಸೆದಿದ್ದ ಗೌತಮ್ ಸುದರ್ಶನ್ ಹಾಗೂ ಅದನ್ನು ಚಿತ್ರೀಕರಿಸಿಕೊಂಡಿದ್ದ ಅಶೀಶ್ ಪಾಲ್ ರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಚೆನ್ನೈನಲ್ಲಿ ಅಂತಿಮ ವರ್ಷದ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದ ಇವರುಗಳು, ತಾವು ವಾಸವಿದ್ದ ಕಟ್ಟಡದ ಮೇಲಿನಿಂದ ನಾಯಿಯನ್ನು ಕೆಳಗೆಸೆದು ವಿಕೃತ ಆನಂದವನ್ನನುಭವಿಸಿದ್ದರಲ್ಲದೇ ಇದರ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಇವರ ಕ್ರೂರ ಕೃತ್ಯ ಕಂಡು ಆಕ್ರೋಶಗೊಂಡಿದ್ದ ಪ್ರಾಣಿ ದಯಾ ಸಂಘಟನೆಗಳ ಕಾರ್ಯಕರ್ತರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಜೊತೆಗೆ ಆ ನಾಯಿ ಜೀವಂತವಾಗಿರುವುದನ್ನು ಪತ್ತೆ ಹಚ್ಚಿ ಗಾಯಗೊಂಡಿದ್ದ ಅದಕ್ಕೆ ಚಿಕಿತ್ಸೆ ಕೊಡಿಸಿದ್ದರು.
ಬಂಧನ ಭೀತಿಯಲ್ಲಿ ತಲೆಮರೆಸಿಕೊಂಡಿದ್ದ ವಿದ್ಯಾರ್ಥಿಗಳನ್ನು ಇದೀಗ ಚೆನ್ನೈ ಪೊಲೀಸರು ಬಂಧಿಸಿ ಕ್ರಮ ಕೈಗೊಂಡಿದ್ದಾರೆ.