ಬೆಂಗಳೂರು: ಟೀಂ ಇಂಡಿಯಾ ನೂತನ ಕೋಚ್ ಅನಿಲ್ ಕುಂಬ್ಳೆ ತಂಡದ ಯಶಸ್ಸಿಗೆ ಏನೆಲ್ಲಾ ಕಾರ್ಯತಂತ್ರ ರೂಪಿಸಿದ್ದು, ಬೆಂಗಳೂರಿನಲ್ಲಿ ನಡೆದ ಅಭ್ಯಾಸ ಶಿಬಿರದಲ್ಲಿ ಅವನ್ನು ಪ್ರಯೋಗಿಸಿದ್ದಾರೆ. ಆಟಗಾರರಲ್ಲಿ ಸಾಮರ್ಥ್ಯ ಹೆಚ್ಚಿಸಲು ಕುಂಬ್ಳೆ ಹಲವು ಕ್ರಮ ಕೈಗೊಂಡಿದ್ದಾರೆ.
ಅಭ್ಯಾಸದ ಜೊತೆಗೆ ಸಂಗೀತ ಕಾರ್ಯಕ್ರಮವನ್ನು ನಡೆಸಿ, ಆಟಗಾರರಲ್ಲಿ ಉತ್ಸಾಹ ಮೂಡಿಸಿದ ಕುಂಬ್ಳೆ ಒತ್ತಡದಿಂದ ಹೊರಬಂದು ಆಟದ ಮೇಲೆ ಗಮನ ಕೇಂದ್ರೀಕರಿಸಲು ಕಾರಣರಾಗಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾ ಆಟಗಾರರಿಗೆ ವಿಶೇಷ ಅಭ್ಯಾಸ ಪಂದ್ಯವೊಂದನ್ನು ಕುಂಬ್ಳೆ ನಡೆಸಿದ್ದಾರೆ. ಈ ಅಭ್ಯಾಸ ಪಂದ್ಯದಲ್ಲಿ ಅಜಿಂಕ್ಯ ರೆಹಾನೆ ಹೊರತುಪಡಿಸಿ, ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳು ನಿರೀಕ್ಷೆಗೆ ತಕ್ಕಂತೆ ಆಟವಾಡಿಲ್ಲ. ಪ್ರತಿ ಬ್ಯಾಟ್ಸ್ ಮನ್ ಗಳಿಗೆ 1 ಗಂಟೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಲಾಗಿತ್ತು.
ಈ ಅಭ್ಯಾಸ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ 2 ಬಾರಿ ಆಟವಾಡಿ ಔಟ್ ಆಗಿದ್ದಾರೆ. ಅದೇ ರೀತಿ ಆರಂಭಿಕ ಆಟಗಾರರಾದ ಶಿಖರ್ ಧವನ್ ಮತ್ತು ಮುರಳಿ ವಿಜಯ್ ಕೂಡ ಔಟ್ ಆಗಿದ್ದು, ಅಜಿಂಕ್ಯ ರೆಹಾನೆ ಮಾತ್ರ 1 ಗಂಟೆ ಕ್ರೀಸ್ ನಲ್ಲಿ ನಿಂತು ಬ್ಯಾಟ್ ಬೀಸಿದ್ದಾರೆ ಎನ್ನಲಾಗಿದೆ.